
ಕೀವ್/ಚೆನ್ನೈ: ಭಾರತೀಯ ಸೇನೆ ಸೇರಲು ಪ್ರಯತ್ನಿಸಿ ಎರಡು ಬಾರಿ ತಿರಸ್ಕೃತಗೊಂಡಿದ್ದ ತಮಿಳುನಾಡಿನ ವಿದ್ಯಾರ್ಥಿಯೋರ್ವ ಇದೀಗ ಉಕ್ರೇನ್ ಸೇರಿ ರಷ್ಯಾ ವಿರುದ್ಧ ಗನ್ ಹಿಡಿದು ಹೋರಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಉಕ್ರೇನ್ ನಲ್ಲಿ ಕೊನೆಯ ವರ್ಷದ ಏರೋ ಸ್ಪೇಸ್ ಇಂಜಿನಿಯರಿಂಗ್ ಕಲಿಯುತ್ತಿದ್ದ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷದ ಸಾಯಿನಿಕೇಶ್ ರವಿಚಂದ್ರನ್ ಎಂಬ ವಿದ್ಯಾರ್ಥಿ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್‌ನಲ್ಲಿ ಅರೆಸೈನಿಕ ಪಡೆಗಳನ್ನು ಸೇರಿಕೊಂಡಿದ್ದಾನೆ. ಜಾರ್ಜಿಯನ್ ನ್ಯಾಷನಲ್ ಲೀಜನ್ ಅರೆಸೇನಾ ಘಟಕದ ಸದಸ್ಯನಾಗಿ ಯುದ್ಧದಲ್ಲಿ ಭಾಗಿಯಾಗಿದ್ದಾನೆ. ಈತನ ಹಿನ್ನಲೆ ವಿಚಾರಿಸಿದಾಗ ಸಾಯಿನಿಕೇಶ್ ಈ ಹಿಂದೆ ಭಾರತೀಯ ಸೇನೆಗೆ ಸೇರಲು ಅರ್ಜಿ ಸಲ್ಲಿಸಿದ್ದ ಮತ್ತು ಆತನನ್ನು 2 ಬಾರಿ ತಿರಸ್ಕರಿಸಲಾಗಿತ್ತು ಎಂಬ ವಿಚಾರ ತಿಳಿದುಬಂದಿದೆ.
ಉಕ್ರೇನ್ ಯುದ್ಧದ ಕಾರಣ ಸಾಯಿನಿಕೇಶ್ ಕುಟುಂಬವು ಸಾಯಿನಿಕೇಶ್ ನೊಂದಿಗೆ ಸಂಪರ್ಕ ಕಳೆದುಕೊಂಡಿತ್ತು. ರಾಯಭಾರ ಕಚೇರಿಯ ಸಹಾಯದಿಂದ ಸಾಯಿಕೇಶ್ ನನ್ನು ಸಂಪರ್ಕಿಸಿದ್ದು ರಷ್ಯಾ ವಿರುದ್ಧ ಹೋರಾಡಲು ಉಕ್ರೇನಿಯನ್ ಅರೆಸೈನಿಕ ಪಡೆಗಳನ್ನು ಸೇರಿಕೊಂಡಿರುವುದಾಗಿ ಸಾಯಿನಿಕೇಶ್ ತಮ್ಮ ಕುಟುಂಬಕ್ಕೆ ತಿಳಿಸಿದ್ದಾನೆ.
ವಿಷಯ ತಿಳಿದ ಸಾಯಿನಿಕೇಶ್ ತಂದೆ “ನಾನು ತುಂಬಾ ಅಸಮಾಧಾನಗೊಂಡಿದ್ದೇನೆ ಮತ್ತು ನನ್ನ ಮಗನನ್ನು ಭಾರತಕ್ಕೆ ಮರಳಿ ಕರೆತರುವಂತೆ ನಾನು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಸರಕಾರದವರು ಸ್ಸಾಯಿನಿಕೇಶ್ ಸುರಕ್ಷಿತವಾಗಿದ್ದಾರೆ ಆದರೆ ಆತ ನಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಹೇಳಿದರು. ನಾನು ಈ ಮೂಲಕ ನನ್ನ ಮಗ ಹಿಂತಿರುಗಲು ವಿನಂತಿಸುತ್ತೇನೆ” ಎಂದು ಮನವಿ ಮಾಡಿಕೊಂಡಿದ್ದಾರೆ.












































