National

ಅಫ್ಘಾನಿಸ್ತಾನದಲ್ಲಿ ಮಸೀದಿ ಸ್ಫೋಟಕ್ಕೆ 33 ಸಾವು, 43 ಮಂದಿಗೆ ಗಾಯ

ಕುಂದುಜ್: ಐಸಿಸ್ ಗುಂಪಿನ ಎರಡು ಪ್ರತ್ಯೇಕ ದಾಳಿಗಳ ಒಂದು ದಿನದ ಬಳಿಕ ಉತ್ತರ ಅಫ್ಘಾನಿಸ್ತಾನದಲ್ಲಿ ಶುಕ್ರವಾರ (ಏಪ್ರಿಲ್ 22, 2022) ಪ್ರಾರ್ಥನೆಯ ವೇಳೆ ಮಸೀದಿಯಲ್ಲಿ ಮತ್ತೊಂದು ಬಾಂಬ್ ಸ್ಫೋಟ ಸಂಭವಿಸಿ ಮಕ್ಕಳು ಸೇರಿದಂತೆ 33 ಜನರು ಸಾವನ್ನಪ್ಪಿದ್ದಾರೆ. ಸ್ಫೋಟದಲ್ಲಿ ಕನಿಷ್ಠ 43 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯದ ಕುಂದುಜ್‌ನಲ್ಲಿರುವ ತಾಲಿಬಾನ್ ನೇತೃತ್ವದ ಸರ್ಕಾರದ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾನೆ.

ಕುಂದುಜ್ ಪ್ರಾಂತ್ಯದ ಇಮಾಮ್ ಸಾಹಿಬ್ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಸ್ಫೋಟ ಸಂಭವಿಸಿದೆ. ಇದರ ಪರಿಣಾಮವಾಗಿ ಹಲವಾರು ಮಕ್ಕಳು ಸೇರಿದಂತೆ 33 ಗ್ರಾಮಸ್ಥರು ಸಾವನ್ನಪ್ಪಿದ್ದಾರೆ ಮತ್ತು 43 ಮಂದಿ ಗಾಯಗೊಂಡಿದ್ದಾರೆ.

ಶುಕ್ರವಾರ ಮಧ್ಯಾಹ್ನ ಸುಮಾರು 2:30 ಗಂಟೆಗೆ ಇಮಾಮ್ ಸಾಹಿಬ್‌ನಲ್ಲಿರುವ ಮುಲ್ಲಾ ಸಿಕಂದರ್ ಮಸೀದಿಯಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಶುಕ್ರವಾರದ ಪ್ರಾರ್ಥನೆಯ ನಂತರ ಅಲ್ಲಾಹನ ಆರಾಧಕರ ಗುಂಪು ವಿಶೇಷ ಧಾರ್ಮಿಕ ಆಚರಣೆಯಾದ ಜಿಕ್ರ್ ಅನ್ನು ಆಚರಣೆಗೆ ತಂದಾಗ ಈ ಘಟನೆ ಸಂಭವಿಸಿದೆ. ಸ್ಫೋಟದಿಂದ ಮಸೀದಿಯ ಒಂದು ಬದಿ ಸಂಪೂರ್ಣ ಧ್ವಂಸಗೊಂಡಿದೆ.

ಈ ಸ್ಪೋಟದ ಒಂದು ದಿನದ ಹಿಂದೆ ಗುರುವಾರ, ಉತ್ತರ ಬಾಲ್ಖ್ ಪ್ರಾಂತ್ಯದ ರಾಜಧಾನಿಯಾದ ಮಜರ್-ಇ-ಶರೀಫ್ ನಗರದಲ್ಲಿ ಮಸೀದಿಯನ್ನು ಗುರಿಯಾಗಿಸಿಕೊಂಡು ನಡೆದ ಸ್ಫೋಟ ಸೇರಿದಂತೆ ಅನೇಕ ಸ್ಫೋಟಗಳಲ್ಲಿ 34 ಜನರು ಸಾವನ್ನಪ್ಪಿದ್ದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

Exit mobile version