National

ಕಾಶ್ಮೀರದಲ್ಲಿ ನಿಲ್ಲದ ಹಿಂದೂಗಳ ಟಾರ್ಗೆಟ್ ಕಿಲ್ಲಿಂಗ್: ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ಗುಂಡಿಕ್ಕಿ ಹತ್ಯೆ

ಕುಲ್ಗಾಮ್: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಹಿಂದೂ ಧರ್ಮೀಯ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದುಗಳನ್ನು ಟಾರ್ಗೆಟ್ ಮಾಡಿ ಕೊಲ್ಲುತ್ತಿರುವುದು ಮುಂದುವರೆದಿದ್ದು ಕಳೆದ 3 ದಿನಗಳಲ್ಲಿ ನಡೆದ 2ನೇ ಕೊಲೆ ಇದಾಗಿದೆ.

“ಕುಲ್ಗಾಮ್ ಜಿಲ್ಲೆಯ ಅರೆಹ್ ಮೋಹನ್‌ಪೋರಾದಲ್ಲಿರುವ ಎಲ್ಲಕಿ ದೇಹತಿ ಬ್ಯಾಂಕ್‌ನಲ್ಲಿ ಬ್ಯಾಂಕ್ ಮ್ಯಾನೇಜರ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಈ ಭಯೋತ್ಪಾದಕ ಘಟನೆಯಲ್ಲಿ ಅವರು ಗಂಭೀರವಾದ ಗುಂಡೇಟಿನಿಂದ ಗಾಯಗೊಂಡಿದ್ದರು. ಆದರೆ ಆಸ್ಪತ್ರೆ ಮಾರ್ಗದಲ್ಲಿ ಅವರು ಸಾವಿಗೀಡಾದರು. ಅವರು ರಾಜಸ್ಥಾನದ ಹನುಮಾನ್‌ಗಢ ನಿವಾಸಿಯಾಗಿದ್ದಾರೆ. ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಮುಂಜಾನೆ, ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ 36 ವರ್ಷದ ಕಾಶ್ಮೀರಿ ಪಂಡಿತ್ ಹಾಗು ಪ್ರೌಢಶಾಲಾ ಶಿಕ್ಷಕಿ ರಜನಿ ಬಾಲಾ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಕಳೆದ ಎರಡು ತಿಂಗಳುಗಳಲ್ಲಿ ಕಾಶ್ಮೀರಿ ಪಂಡಿತ್ ಉದ್ಯೋಗಿ ರಾಹುಲ್ ಭಟ್ ಸೇರಿದಂತೆ ಇಬ್ಬರು ನಾಗರಿಕರು ಮತ್ತು ಮೂವರು ಕರ್ತವ್ಯ ನಿರತ ಪೊಲೀಸರನ್ನು ಕಾಶ್ಮೀರದಲ್ಲಿ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ.

ಏತನ್ಮಧ್ಯೆ, ಕಾಶ್ಮೀರದಲ್ಲಿ ಉದ್ಯೋಗದಲ್ಲಿರುವ ಹಿಂದೂ ಸಮುದಾಯಕ್ಕೆ ಸೇರಿದ ಜನರು ಜಮ್ಮುವಿನಲ್ಲಿ ಪ್ರತಿಭಟನೆ ನಡೆಸಿದರು ಮತ್ತು ತಮ್ಮ ಸಮುದಾಯದ ಸದಸ್ಯರಿಗೆ ಭದ್ರತೆಯನ್ನು ಒದಗಿಸಲು ಒತ್ತಾಯಿಸಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು, ನಮ್ಮ ವಾಟ್ಸಾಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd

Exit mobile version