
ಜಮ್ಮು: ಜಮ್ಮುವಿನ ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗವು ಹಠಾತ್ ಕುಸಿದ ಘಟನೆಯಲ್ಲಿ ಈವರೆಗೆ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಆರು ಮಂದಿ ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಶುಕ್ರವಾರ ಸಂಜೆ ಭೂಕುಸಿತ ಸಂಭವಿಸಿದ್ದು ರಕ್ಷಣಾ ಕಾರ್ಯಾಚರಣೆಯನ್ನು ಶನಿವಾರ ಮುಂಜಾನೆಯಿಂದ ಮುಂದುವರೆಸಲಾಗಿತ್ತು.
ಭೂಕುಸಿತದ ಸಂಭವಿಸಿದ ಈ ಪ್ರದೇಶದಲ್ಲಿ ಅವಶೇಷಗಳಡಿ ಸಿಲುಕಿರುವ ಕಾರ್ಮಿಕರುಬದುಕಿ ಉಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ಅಂದಾಜಿಸಲಾಗಿದೆ. ಸ್ಥಳದಿಂದ ಮೂವರು ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ಮಾಣಗೊಳ್ಳುತ್ತಿರುವ ಚತುಷ್ಪಥ ರಸ್ತೆಯ ಬನಿಹಾಲ್-ರಾಂಬನ್ ವಿಭಾಗದಲ್ಲಿ ಹಲವು ಸುರಂಗಗಳನ್ನು ನಿರ್ಮಿಸಲಾಗುತ್ತಿತ್ತು. ಇದೇ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ.
ಘಟನೆ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾತನಾಡಿ, “ಈ ಅಪಘಾತ ದುರದೃಷ್ಟಕರ. ನಾನು ಡಿಸಿ ಮುಸ್ರತ್ ಇಸ್ಲಾಂ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಸುಮಾರು 10 ಕಾರ್ಮಿಕ ಕಾರ್ಮಿಕರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ಇನ್ನಿಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ” ಎಂದಿದ್ದಾರೆ.












































