
ನವದೆಹಲಿ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಸುಮಾರು ನೂರಕ್ಕೂ ಅಧಿಕ ಉಗ್ರರು ಇನ್ನೂ ಕೂಡ ಅಫ್ಘಾನಿಸ್ತಾನದಲ್ಲಿ ಇದ್ದು, ಎರಡೂ ಭಯೋತ್ಪಾದಕ ಗುಂಪುಗಳು ಕುನಾರ್ ಮತ್ತು ನಂಗರ್‌ಹಾರ್ ಪ್ರದೇಶಗಳಲ್ಲಿ ಕನಿಷ್ಠ 11 ತರಬೇತಿ ಶಿಬಿರಗಳ ಮೂಲಕ ತರಬೇತಿ ಪಡೆಯುತ್ತಿವೆ ಎಂದು ಯುಎನ್ (ವಿಶ್ವ ಸಂಸ್ಥೆ) ಹೊಸ ತನಿಖಾ ವರದಿ ಬಹಿರಂಗಪಡಿಸಿದೆ.
ತಾಲಿಬಾನ್ ಮೇಲೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಬಂಧಗಳನ್ನು ಮೇಲ್ವಿಚಾರಣೆ ಮಾಡುವ ತಂಡದ ವರದಿಯು ಅಫ್ಘಾನಿಸ್ತಾನದ ನಂಗರ್‌ಹಾರ್‌ನಲ್ಲಿನ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳುತ್ತದೆ. ಜೆಇಎಂ ಎಂಟು ಶಿಬಿರಗಳನ್ನು ನಡೆಸುತ್ತಿದೆ ಅವುಗಳಲ್ಲಿ ಮೂರು ನೇರವಾಗಿ ತಾಲಿಬಾನ್ ಅಡಿಯಲ್ಲಿ ನಡೆಸುತ್ತಿದೆ. ಮತ್ತೊಂದು ಉಗ್ರಗಾಮಿ ಕೂಟ ಎಲ್‌ಇಟಿ ಕುನಾರ್ ಮತ್ತು ನಂಗರ್‌ಹಾರ್‌ನಲ್ಲಿ ಮೂರು ಶಿಬಿರಗಳನ್ನು ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1988ರ ನಿರ್ಬಂಧಗಳ ಸಮಿತಿಗೆ ಸಹಾಯ ಮಾಡುವ ಮೇಲ್ವಿಚಾರಣಾ ತಂಡದ ಮೊದಲ ವರದಿ ಇದಾಗಿದೆ.
ಈ ಅನ್ವೇಷಣೆಗಳು ಅಫ್ಘಾನಿಸ್ತಾನದ ಮಣ್ಣನ್ನು ವಿದೇಶಿ ಉಗ್ರರಿಗೆ ಬಳಸಲು ಅನುಮತಿಸುವುದಿಲ್ಲ ಎಂಬ ತಾಲಿಬಾನ್‌ನ ಹೇಳಿಕೆಯನ್ನು ಸುಳ್ಳು ಎಂದು ಬಿಂಬಿಸುತ್ತದೆ. ಜತೆಗೆ ಅಫ್ಘಾನಿಸ್ತಾನದಲ್ಲಿ ಈಸ್ಟರ್ನ್ ತುರ್ಕಿಸ್ತಾನ್ ಇಸ್ಲಾಮಿಕ್ ಮೂವ್‌ಮೆಂಟ್, ಇಸ್ಲಾಮಿಕ್ ಮೂವ್ಮೆಂಟ್ ಆಫ್ ಉಜ್ಬೇಕಿಸ್ತಾನ್ ಸೇರಿದಂತೆ ಹಲವು ಅನ್ಯದೇಶಗಳ ಉಗ್ರ ಸಂಘಟನೆಗಳು ಇನ್ನೂ ಸಕ್ರಿಯವಾಗಿದೆ ಎಂದು ಹೇಳಿದೆ.
ಸುದ್ದಿಯನ್ನು ನೇರವಾಗಿ ಪಡೆಯಲು, ನಮ್ಮ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd












































