
ಇಸ್ಲಾಮಾಬಾದ್: ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಿಪಕ್ಷಗಳು ಜಾರಿ ಮಾಡಿದ್ದ ಅವಿಶ್ವಾಸ ನಿರ್ಣಯವನ್ನು ಉಪ ಸಭಾಪತಿಯವರು ತಿರಸ್ಕರಿಸುವ ಮೂಲಕ ಇಮ್ರಾನ್ ಪದಚ್ಯುತಿ ಮುಖಭಂಗದಿಂದ ತಪ್ಪಿಸಿಕೊಂಡಿದ್ದು ಇದೀಗ ಪ್ರಧಾನಿ ಇಮ್ರಾನ್ ಸಲಹೆ ಮೇರೆಗೆ ಅಧ್ಯಕ್ಷ ಅಲ್ವಿ ಅವರು ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ್ದಾರೆ.
342 ಸದಸ್ಯರನ್ನೊಳಗೊಂಡ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಬಹುಮತ ಕಳೆದುಕೊಂಡಿದ್ದು ಇಮ್ರಾನ್ ಸರಕಾರಕ್ಕೆ ಬಂಬಲ ಸೂಚಿಸಿದ್ದ ಮಿತ್ರ ಪಕ್ಷಗಳೇ ಬೆಂಬಲ ವಾಪಸು ಪಡೆದು ವಿಪಕ್ಷಗಳ ಜತೆ ಕೈಜೋಡಿಸಿವೆ. ಮತ್ತು ಸ್ವಪಕ್ಷೀಯರಿಂದಲೂ ಇಮ್ರಾನ್ ಖಾನ್ ಬಂಡಾಯ ಎದುರಿಸುತ್ತಿದ್ದಾರೆ. ಅಲ್ಲಿನ ಸಚಿವರು ನೀಡಿರುವ ಮಾಹಿತಿಯ ಪ್ರಕಾರ 90 ದಿನಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಪಾಕ್ ಸಂಸತ್ತಿನಲ್ಲಿ ಉಪ ಸಭಾಪತಿ ಅವಿಶ್ವಾಸ ನಿರ್ಣಯ ತಿರಸ್ಕಾರ ಮಾಡಿರುವುದನ್ನು ಪ್ರಧಾನಿ ಇಮ್ರಾನ್ ಖಾನ್ ಸ್ವಾಗತಿಸಿದ್ದಾರೆ. ಪಾಕಿಸ್ತಾನ ಚುನಾವಣೆಗೆ ತಯಾರಾಗಬೇಕಿದ್ದು ಜನರೇ ತಮಗೆ ಯಾರ ಸರಕಾರ ಬೇಕು ಎಂಬುದನ್ನು ಆರಿಸುತ್ತಾರೆ ಎಂದು ಹೇಳಿದ್ದಾರೆ.












































