
ಸಿಂಧ್ ಪ್ರಾಂತ್ಯ : ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಉದ್ಯಮಿಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದ್ದು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಅವ್ಯಾಹತವಾಗಿ ಮುಂದುವರೆದಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ದಹರ್ಕಿ ಟೌನ್‌ನಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಹತ್ಯೆಗೆ ಒಳಗಾದ ವ್ಯಕ್ತಿಯನ್ನು ಸೈತಾನ್ ಲಾಲ್ ಎಂದು ಗುರುತಿಸಲಾಗಿದೆ.
“ಸೈತಾನ್ ಲಾಲ್ ಅವರ ಜಮೀನಿನಲ್ಲಿ ಹತ್ತಿ ಕಾರ್ಖಾನೆ ಮತ್ತು ಹಿಟ್ಟಿನ ಗಿರಣಿ ಉದ್ಘಾಟನೆ ನಡೆದಿತ್ತು, ಅಲ್ಲಿ ಕೆಲವರು ಅವರನ್ನು ಗುಂಡಿಕ್ಕಿ ಕೊಂದರು” ಎಂದು ಲಾಲ್ ಅವರ ಸ್ನೇಹಿತ ಮುಖಿ ಅನಿಲ್ ಹೇಳಿಕೊಂಡಿದ್ದಾರೆ.
ಒಂದೇ ತಿಂಗಳ ಅಂತರದಲ್ಲಿ ಒಟ್ಟು ಇಬ್ಬರು ಹಿಂದೂ ಉದ್ಯಮಿಗಳನ್ನು ಹತ್ಯೆ ಮಾಡಲಾಗಿದೆ. ಇದೇ ವರ್ಷದ ಆರಂಭದಲ್ಲಿ ಜನವರಿ 4 ರಂದು, ಸಿಂಧ್ ಪ್ರಾಂತ್ಯದ ಅನಾಜ್ ಮಂಡಿಯಲ್ಲಿ ಹಿಂದೂ ಉದ್ಯಮಿ ಸುನೀಲ್ ಕುಮಾರ್ ಅವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆಗೈದಿದ್ದರು.
ಜನವರಿ 30 ರಂದು, ಪಾಕಿಸ್ತಾನದ ವಾಯುವ್ಯ ಪೇಶಾವರ್ ನಗರದಲ್ಲಿ ಅಪರಿಚಿತ ಬಂದೂಕುಧಾರಿಗಳು ಕ್ರಿಶ್ಚಿಯನ್ ಪಾದ್ರಿ ಒಬ್ಬರನ್ನು ಗುಂಡಿಕ್ಕಿ ಸಾಯಿಸಿದ್ದರು.












































