HomeNationalದೇಶದಲ್ಲಿ ಪೆಟ್ರೋಲ್, ಡೀಸೆಲ್ ಬಿಕ್ಕಟ್ಟು: ಶ್ರೀಲಂಕಾದ ಹಾದಿಯಲ್ಲಿ ಭಾರತ? ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಪಂಪ್‌ಗಳು ಖಾಲಿ...

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬಿಕ್ಕಟ್ಟು: ಶ್ರೀಲಂಕಾದ ಹಾದಿಯಲ್ಲಿ ಭಾರತ? ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಪಂಪ್‌ಗಳು ಖಾಲಿ ಖಾಲಿ

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಿಕ್ಕಟ್ಟು ತಲೆದೋರುವ ಲಕ್ಷಣಗಳು ಕಂಡುಬರುತ್ತಿದ್ದು ಭಾರತದ ಹಲವಾರು ರಾಜ್ಯಗಳಲ್ಲಿ ಹಲವು ಪೆಟ್ರೋಲ್ ಪಂಪುಗಳು ಖಾಲಿಯಾಗಿವೆ. ರಾಜಸ್ಥಾನ, ಆಂಧ್ರಪ್ರದೇಶ, ಪಂಜಾಬ್, ಹರಿಯಾಣ, ಉತ್ತರಾಖಂಡ, ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಪೆಟ್ರೋಲ್ ಪಂಪ್‌ಗಳು ಕಳೆದೆರಡು ದಿನಗಳಲ್ಲಿ ಸರ್ಪ ಸರತಿ ಸಾಲುಗಳನ್ನು ಕಂಡಿವೆ. ವಾಹನ ಮಾಲೀಕರು ತಮ್ಮ ಟ್ಯಾಂಕ್‌ಗಳ ಮರುಪೂರಣಕ್ಕಾಗಿ ಸ್ಟಾಕ್ ಇರುವ ಇಂಧನ ಕೇಂದ್ರಗಳಿಗೆ ಮುಗಿಬೀಳುತ್ತಿದ್ದಾರೆ.

ಪೆಟ್ರೋಲಿಯಂ ವಿತರಕರ ಪ್ರಕಾರ, ಬಿಪಿಸಿಎಲ್ ಮತ್ತು ಎಚ್.ಪಿ.ಸಿ.ಎಲ್ ನಂತಹ ತೈಲ ಮಾರುಕಟ್ಟೆ ಕಂಪನಿಗಳು ಒಟ್ಟು ಬೇಡಿಕೆಯ ಕಾಲು ಭಾಗದಷ್ಟು ತೈಲವನ್ನು ಮಾತ್ರ ನೀಡುತ್ತಿವೆ. ಹಾಗಾಗಿ ಹಲವು ಪೆಟ್ರೋಲ್ ಪಂಪುಗಳು ಒಂದು ದಿನ ಪೆಟ್ರೋಲ್ ಡೀಸೆಲ್ ನೀಡಿದರೆ ಮತ್ತೊಂದು ದಿನ ಖಾಲಿ ಹೊಡೆಯುತ್ತಿರುತ್ತವೆ.

ಏತನ್ಮಧ್ಯೆ, ಇಂಧನ ಬಿಕ್ಕಟ್ಟಿನ ಕುರಿತು ಹರಿದಾಡುತ್ತಿರುವ ವದಂತಿಗಳನ್ನು ಅಲ್ಲಗಳೆದಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ನಿರ್ದೇಶಕ (ಮಾರ್ಕೆಟಿಂಗ್) ವಿ ಸತೀಶ್ ಕುಮಾರ್ ಅವರು ಟ್ವೀಟ್ ಮೂಲಕ ಉತ್ತರ ನೀಡಿದ್ದು, “ನಮ್ಮ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಉತ್ಪನ್ನ ಲಭ್ಯತೆ ಎಂದಿನಂತಿದೆ ಮತ್ತು ಸಾಕಷ್ಟು ಉತ್ಪನ್ನ ಲಭ್ಯತೆ ಇದೆ” ಎಂದು ಹೇಳಿದ್ದಾರೆ.

ಜೈಪುರದ 100 ಸೇರಿದಂತೆ ರಾಜಸ್ಥಾನದಾದ್ಯಂತ ಸುಮಾರು 2,000 ಪೆಟ್ರೋಲ್ ಪಂಪ್‌ಗಳು ಖಾಲಿಯಾಗಿವೆ. ಸುಮಾರು ಎರಡು ವಾರಗಳ ಕಾಲ ರಿಲಯನ್ಸ್ ಮತ್ತು ಎಸ್ಸಾರ್‌ನ ಪೆಟ್ರೋಲ್ ಪಂಪ್‌ಗಳನ್ನು ಮುಚ್ಚಿರುವುದು ಈ ಕೊರತೆಗೆ ಮೊದಲ ಪ್ರಮುಖ ಕಾರಣ ಎಂದು ರಾಜಸ್ಥಾನ ಪೆಟ್ರೋಲ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಸುನೀತ್ ಬಗೈ ಹೇಳಿದ್ದಾರೆ. ರಾಜಸ್ಥಾನದಲ್ಲಿ ಈ ಎರಡೂ ಕಂಪನಿಗಳ ಮಾರುಕಟ್ಟೆ ಪಾಲು ಶೇ.15 ರಷ್ಟಿದ್ದು, ಈಗ ಅವುಗಳ ಪಂಪ್‌ಗಳು ಮುಚ್ಚಿದಾಗ ಅವುಗಳ ಹೊರೆ ಬೇರೆ ಕಂಪನಿಗಳ ಪೆಟ್ರೋಲ್ ಪಂಪ್‌ಗಳ ಮೇಲೆ ಬಂದಿದೆ ಎಂದು ಸುನೀತ್ ಬಗೈ ಹೇಳಿದ್ದಾರೆ. ಎರಡನೆಯ ಕಾರಣವೆಂದರೆ ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್‌ನಿಂದ ಪೂರೈಕೆಯನ್ನು ಕಡಿಮೆ ಮಾಡಲಾಗುತ್ತಿದೆ. ಸುನಿತ್ ಬಾಗೈ ಪ್ರಕಾರ, ಇಂಡಿಯನ್ ಆಯಿಲ್ ಕಂಪನಿ ಮಾತ್ರ ಸಂಪೂರ್ಣ ಪೂರೈಕೆಯನ್ನು ನೀಡುತ್ತಿದೆ.

ದಕ್ಷಿಣದಲ್ಲಿ ಆಂಧ್ರ ಪ್ರದೇಶವು ಕೂಡ ಡೀಸೆಲ್ ಮತ್ತು ಪೆಟ್ರೋಲ್‌ನ ಗಂಭೀರ ಕೊರತೆಯನ್ನು ಎದುರಿಸುತ್ತಿದೆ. ಇದು ಹೀಗೆಯೇ ಮುಂದುವರಿದರೆ ದೇಶದ ಎಲ್ಲ ರಾಜ್ಯಗಳಲ್ಲಿ ಪೆಟ್ರೋಲ್ ಡೀಸೆಲ್ ಕೊರತೆ ಏರ್ಪಡಲಿದೆ ಎಂದು ಅಂದಾಜಿಸಲಾಗಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments