
ಮುಂಬೈ: ದೇಶದ ಅತಿ ಉದ್ದದ ಸಮುದ್ರ ಸೇತುವೆ ‘ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್’ (MTHL) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಲೋಕಾರ್ಪಣೆಗೊಳಿಸಿದರು. ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ಪನ್ವೆಲ್ ನಡುವಿನ ಈ ಸಮುದ್ರ ಸೇತುವೆಯ ಉದ್ದ ಒಟ್ಟು 21.8 ಕಿಮೀ. ಇದನ್ನು ಅಟಲ್ ಸೇತು ಎಂದು ಕೂಡ ಕರೆಯಲಾಗುತ್ತದೆ.
ಈ ಸೇತುವೆ ದೇಶದ ಅಭಿವೃದ್ಧಿ ವೇಗಕ್ಕೆ ಮತ್ತೊಂದು ಗರಿಯಾಗಿದೆ. ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಸೇತುವೆ ರಾಯಗಢ ಜಿಲ್ಲೆಯ ಪನ್ವೆಲ್ ಮತ್ತು ದಕ್ಷಿಣ ಮಧ್ಯ ಮುಂಬೈನ ಸೆವ್ರಿ ನಡುವಿನ ಅಂತರವನ್ನು ಕಡಿಮೆಗೊಳಿಸುತ್ತದೆ ಮತ್ತು ಪ್ರಯಾಣದ ಸಮಯ ಸುಮಾರು ಎರಡು ಗಂಟೆಗಳಿಂದ 15 ರಿಂದ 20 ನಿಮಿಷಗಳಿಗೆ ಇಳಿಯಲಿದೆ.

ಸೇತುವೆ ಉದ್ಘಾಟನೆ ವೇಳೆ ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹಾಜರಿದ್ದರು.












































