
ನವದೆಹಲಿ: ಮುಂದಿನ ನೂರು ವರ್ಷಗಳ ಕಾಲ ಅಧಿಕಾರಕ್ಕೆ ಏರಬಾರದು ಎಂದು ಸ್ವತಃ ನೀವೇ ನಿರ್ಧರಿಸಿದಂತಿದೆ. ಕಾಂಗ್ರೆಸ್ ಪಕ್ಷವನ್ನು ಒಮ್ಮೆ ತಿರಸ್ಕರಿಸಿದ ರಾಜ್ಯಗಳು ಮತ್ತೆ ಸ್ವೀಕರಿಸುವುದಿಲ್ಲ ಎಂದು ಲೋಕಸಭೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ತಮಿಳುನಾಡು, ತೆಲಂಗಾಣ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳು ಕಾಂಗ್ರೆಸ್ ಅನ್ನು ಒಮ್ಮೆ ತಿರಸ್ಕರಿಸಿದ ನಂತರ ಮತ್ತೆ ಅಧಿಕಾರಕ್ಕೆ ತರಲಿಲ್ಲ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದರು.
“ನಾಗಾಲ್ಯಾಂಡ್ 24 ವರ್ಷಗಳ ಹಿಂದೆ ಕಾಂಗ್ರೆಸ್‌ಗೆ ಮತ ಹಾಕಿದೆ, ಒಡಿಶಾ 27 ವರ್ಷಗಳ ಹಿಂದೆ ನಿಮಗೆ ಮತ ಹಾಕಿದೆ. 28 ವರ್ಷಗಳ ಹಿಂದೆ ನೀವು ಗೋವಾದಲ್ಲಿ ಪೂರ್ಣ ಬಹುಮತದೊಂದಿಗೆ ಗೆದ್ದಿದ್ದೀರಿ. 1988ರಲ್ಲಿ ತ್ರಿಪುರಾ ಕೊನೆಯ ಬಾರಿಗೆ ಕಾಂಗ್ರೆಸ್‌ಗೆ ಮತ ಹಾಕಿದೆ. 1972ರಲ್ಲಿ ಪಶ್ಚಿಮ ಬಂಗಾಳ ಕೊನೆಯ ಬಾರಿಗೆ ಕಾಂಗ್ರೆಸ್‌ಗೆ ಮತ ಹಾಕಿದೆ” ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು.
“ಆಂಧ್ರಪ್ರದೇಶವನ್ನು ವಿಭಜನೆ ಮಾಡಿ ತೆಲಂಗಾಣ ರಚನೆಯ ಶ್ರೇಯಸ್ಸನ್ನು ನೀವು ತೆಗೆದುಕೊಂಡಿರಿ. ಆದರೆ ಉಭಯ ರಾಜ್ಯಗಳ ಜನರು ಮತ್ತೆ ನಿಮ್ಮನ್ನು ಸ್ವೀಕರಿಸಲಿಲ್ಲ. ಆಂಧ್ರ ಹಾಗು ತೆಲಂಗಾಣ ಎರಡೂ ಕಡೆ ಮತ್ತೆ ನಿಮ್ಮ ಸರ್ಕಾರ ಬರಲಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದರು.