National

ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷದ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಗಾಂಧಿ ಸಾಧ್ಯತೆ. ಯಾರೀ ಗಾಂಧೀ?

ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಒಗ್ಗಟ್ಟಿನ ಹೋರಾಟ ನಡೆಸಲು ಪ್ರತಿಪಕ್ಷಗಳು ಮುಂದಾಗಿದ್ದು, ಕೆಲವು ನಾಯಕರು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. 2017 ರಲ್ಲಿ ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಗಾಂಧಿಯವರು ಒಮ್ಮತದ ವಿರೋಧ ಪಕ್ಷದ ಅಭ್ಯರ್ಥಿಯಾಗಿದ್ದರು, ಆದರೆ ಚುನಾವಣೆಯಲ್ಲಿ ಎಂ ವೆಂಕಯ್ಯ ನಾಯ್ಡು ವಿರುದ್ಧ ಸೋತಿದ್ದರು.

ಕೆಲವು ವಿರೋಧ ಪಕ್ಷದ ನಾಯಕರು ದೂರವಾಣಿಯಲ್ಲಿ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರಾಷ್ಟ್ರಪತಿ ಹುದ್ದೆಗೆ ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯಾಗಲು ತಮ್ಮ ಮನವಿಯನ್ನು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೋಪಾಲಕೃಷ್ಣ ಗಾಂಧಿ ಅವರು 2004 ರಿಂದ 2009 ರವರೆಗೆ ಪಶ್ಚಿಮ ಬಂಗಾಳದ ಗವರ್ನರ್ ಆಗಿದ್ದರು. ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಗಾಂಧಿ ಅವರು ಸ್ವಲ್ಪ ಸಮಯ ಕೇಳಿದ್ದಾರೆ ಮತ್ತು ಬುಧವಾರದೊಳಗೆ ತಿಳಿಸುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

77 ವರ್ಷದ ಗೋಪಾಲಕೃಷ್ಣ ಗಾಂಧೀ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾಕ್ಕೆ ಭಾರತದ ಹೈ ಕಮಿಷನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಮಹಾತ್ಮಾ ಗಾಂಧಿ ಮತ್ತು ಸಿ ರಾಜಗೋಪಾಲಾಚಾರಿಯವರ ಮೊಮ್ಮಗರಾಗಿದ್ದಾರೆ.

ಗಾಂಧೀ ಅವರು ವಿನಂತಿಯನ್ನು ಸ್ವೀಕರಿಸಿದರೆ, ಅವರು ಉನ್ನತ ಹುದ್ದೆಗೆ ಒಮ್ಮತದ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು ಎಂದು ಮೂಲಗಳು ತಿಳಿಸಿವೆ, ಏಕೆಂದರೆ ಕಳೆದ ಉಪರಾಷ್ಟ್ರಪತಿ ಚುನಾವಣೆಯ ಸಂದರ್ಭ ಅವರ ಬಗ್ಗೆ ವಿರೋಧಪಕ್ಷಗಳಲ್ಲಿ ಒಮ್ಮತವಿತ್ತು.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version