
ಚಂಡೀಗಢ: ಕ್ಯಾಪ್ಟನ್ ಅಮರೇಂದರ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಪಂಜಾಬ್ ಗೆ ನೂತನ ಮುಖ್ಯಮಂತ್ರಿಯ ಆಯ್ಕೆ ಮಾಡಲಾಗಿದ್ದು, ಚರಣ್ ಜೀತ್ ಸಿಂಗ್ ಛನ್ನಿ ಹೊಸ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿದ್ದು ಜತೆಗಿನ ವೈಮನಸ್ಸಿನ ಕಾರಣ ಹಾಗು ತನ್ನ ಬೆನ್ನ ಹಿಂದೆ ನಡೆಯುತ್ತಿದ್ದ ನಾಯಕತ್ವ ವಿರೋಧಿ ಸಭೆಗಳಿಂದಾಗಿ ನೊಂದು ಕ್ಯಾಪ್ಟನ್ ಅಮರೇಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕ್ಯಾಪ್ಟನ್ ರಾಜೀನಾಮೆ ಬಳಿಕ ಚರಣ್ ಜೀತ್ ಸಿಂಗ್ ಛನ್ನಿ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.
ಚರಣ್ ಜೀತ್ ಸಿಂಗ್ ಅವರು ಪಂಜಾಬ್ ನ ಮೊದಲ ದಲಿತ ಮುಖ್ಯಮಂತ್ರಿಯಾಗಲಿದ್ದು ಇವರು ಕ್ಯಾಪ್ಟನ್ ಸಂಪುಟದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಚಾಮ್ಕೌರ್ ಸಾಹಿಬ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಚರಣ್ ಜೀತ್ 2015-2016 ರಲ್ಲಿ ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು.
ಆಯ್ಕೆ ನಂತರ ನವಜೋತ್ ಸಿಂಗ್ ಸಿದ್ದು ಜತೆ ರಾಜ್ಯಪಾಲರನ್ನು ಭೇಟಿ ಮಾಡಿದ ಚರಣ್ ಜೀತ್ ಸಿಂಗ್ ತಮ್ಮ ಅವಿರೋಧ ಆಯ್ಕೆಯನ್ನು ಮನವರಿಕೆ ಮಾಡಿದರು. ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಚರಣ್ ಜೀತ್ ಇಂದು 11 ಗಂಟೆಗೆ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಾಗಿ ತಿಳಿಸಿದರು.