
ನವದೆಹಲಿ: ಕಾಂಗ್ರೆಸ್ ರೆಬೆಲ್ ನಾಯಕ ಗುಲಾಂ ನಬಿ ಆಜಾದ್ ಅವರು ಶುಕ್ರವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಸೋನಿಯಾ ಗಾಂಧಿ ಜತೆಗೆ ಪಕ್ಷವನ್ನು ಬಲಪಡಿಸುವ ಬಗ್ಗೆ ಭಿನ್ನಮತೀಯ ಜಿ -23 ಗುಂಪಿನ ಸಭೆಯಲ್ಲಿ ಚರ್ಚಿಸಿದ ಸಲಹೆಗಳನ್ನು ಹಂಚಿಕೊಂಡಿದ್ದಾರೆ ಎಂದು ಭೇಟಿ ಬಳಿಕ ಆಜಾದ್ ಹೇಳಿದರು.
“ಸೋನಿಯಾ ಗಾಂಧಿಯವರೊಂದಿಗಿನ ಭೇಟಿಯು ಉತ್ತಮವಾಗಿತ್ತು. ಅವರು ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ, ಸೋನಿಯಾ ಗಾಂಧಿ ರಾಜೀನಾಮೆ ನೀಡಬೇಕು ಎಂದು ಯಾರೂ ಹೇಳಲಿಲ್ಲ, ನಾವು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದೇವೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳನ್ನು ಸೋಲಿಸಲು ಒಗ್ಗಟ್ಟಿನಿಂದ ಹೋರಾಡುವ ಕುರಿತು ಚರ್ಚೆ ನಡೆಸಲಾಗಿದೆ” ಎಂದು ಸೋನಿಯಾ ಗಾಂಧಿಯವರ ನಿವಾಸ 10 ಜನಪಥ್ನಲ್ಲಿ ನಡೆದ ಸಭೆಯ ನಂತರ ಆಜಾದ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ, ಮಣಿಪುರ ಮತ್ತು ಗೋವಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆ ಕುರಿತು ಚರ್ಚಿಸಲು ಕಾಂಗ್ರೆಸ್ನಲ್ಲಿ ವ್ಯಾಪಕವಾದ ಸುಧಾರಣೆಗಳಿಗೆ ಕರೆ ನೀಡುತ್ತಿರುವ ಜಿ-23 ನಾಯಕರು ಬುಧವಾರ ಆಜಾದ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದರು. ಆ ಸಭೆಯಲ್ಲಿ ಪಕ್ಷದ ನಾಯಕರಾದ ಕಪಿಲ್ ಸಿಬಲ್, ಭೂಪಿಂದರ್ ಸಿಂಗ್ ಹೂಡಾ, ಆನಂದ್ ಶರ್ಮಾ, ಮನೀಶ್ ತಿವಾರಿ, ಶಶಿ ತರೂರ್, ಮಣಿಶಂಕರ್ ಅಯ್ಯರ್, ಪಿಜೆ ಕುರಿಯನ್, ಪ್ರಣೀತ್ ಕೌರ್, ಸಂದೀಪ್ ದೀಕ್ಷಿತ್ ಮತ್ತು ರಾಜ್ ಬಬ್ಬರ್ ಸೇರಿದಂತೆ ಹಲವು ರೆಬೆಲ್ ನಾಯಕರುಗಳು ಉಪಸ್ಥಿತರಿದ್ದರು.












































