
ಕೊಲಂಬೊ: ಆರ್ಥಿಕವಾಗಿ ದಿವಾಳಿಯಾಗಿರುವ ನೆರೆಯ ಶ್ರೀಲಂಕಾ ಸಂಸತ್ತಿನ ಎಲ್ಲಾ ಸಚಿವರುಗಳು ತಮ್ಮ ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಮಹಿಂದಾ ರಾಜಪಕ್ಸೆ ಪ್ರಧಾನಿಯಾಗಿ ಮುಂದುವರೆದಿದ್ದಾರೆ. 1948ರ ಸ್ವಾತಂತ್ರ್ಯದ ಬಳಿಕ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಅರಾಜಕತೆ ಸೃಷ್ಟಿಯಾಗಿದೆ.
ಭಾನುವಾರ ರಾತ್ರಿ ನಡೆದ ಸಭೆಯಲ್ಲಿ ಸಂಪುಟದ ಎಲ್ಲಾ ಸಚಿವರು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ. ರಾಜೀನಾಮೆ ನೀಡಿದವರಲ್ಲಿ ಪ್ರಧಾನಿ ರಾಜಪಕ್ಸೆ ಅವರ ಪುತ್ರ ನಮಲ್ ರಾಜಪಕ್ಸೆ ಕೂಡ ಸೇರಿದ್ದಾರೆ. ನಮಲ್ ರಾಜಪಕ್ಸ ಶ್ರೀಲಂಕಾದ ಕ್ರೀಡಾ ಸಚಿವರಾಗಿದ್ದರು.
ಲಂಕಾ ಆರ್ಥಿಕ ದಿವಾಳಿಯಾಗಿರುವ ಹಿನ್ನಲೆ ದೇಶದಲ್ಲಿ ಎದ್ದಿರುವ ಹಣದುಬ್ಬರ, ಆಹಾರ ಧಾನ್ಯ ಕೊರತೆ, ತೈಲಗಳ ಅಭಾವದಿಂದಾಗಿ ಜನರು ಸರಕಾರದ ವಿರುದ್ಧ ಬೀದಿಗಿಳಿದಿದ್ದು ಅಲ್ಲಲ್ಲಿ ಹಿಂಸಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಭಾನುವಾರ ವಿದ್ಯಾರ್ಥಿಗಳು ರಾಡೆನಿಯಾ ವಿಶ್ವವಿದ್ಯಾಲಯದ ಹೊರಗೆ ವಾರಾಂತ್ಯದ ಕರ್ಫ್ಯೂವನ್ನು ಧಿಕ್ಕರಿಸಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಫಿರಂಗಿಗಳನ್ನು ಬಳಸಿದ್ದರು. ವಾರಾಂತ್ಯ ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ಕನಿಷ್ಠ 664 ಜನರನ್ನು ಬಂಧಿಸಲಾಗಿದೆ.
ಅಧ್ಯಕ್ಷ ಗೋಟಬಯ ರಾಜಪಕ್ಸೆ ವಿರುದ್ಧದ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನುದಮನ ಮಾಡಲು ಶ್ರೀಲಂಕಾ ಸರ್ಕಾರ ಶನಿವಾರ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಯೂಟ್ಯೂಬ್ ಗಳನ್ನು ನಿರ್ಬಂಧಿಸಿದೆ.












































