
ಕೋಲ್ಕೊತ್ತಾ: ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ಕೋವಿಡ್ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಲು ಉಂಟಾದ ನೂಕುನುಗ್ಗಲಿನಿಂದ ಕಾಲ್ತುಳಿತ ಜರಗಿ ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 5 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ.
ಜಲಪೈಗುರಿ ಜಿಲ್ಲೆಯ ಧೂಪ್ಗುರಿ ಬ್ಲಾಕ್ ನ ಶಾಲೆಯೊಂದನ್ನು ಲಸಿಕಾ ಕೇಂದ್ರವಾಗಿ ಪರಿವರ್ತಿಸಲಾಗಿತ್ತು. ಲಸಿಕೆ ಪಡೆಯಲು ಊರವರೆಲ್ಲರೂ ಒಟ್ಟಾಗಿ ಸೇರಿದುವು ಅವರ ಜತೆ ಟೀ ಉದ್ಯಾನದಲ್ಲಿ ಕೆಲಸ ಮಾಡುವ ಕಾರ್ಮಿಕರೂ ಸೇರಿದ್ದರಿಂದ ನೂಕು ನುಗ್ಗಲು ಉಂಟಾಗಿದೆ. ಸ್ಥಳೀಯರ ಪ್ರಕಾರ ಸುಮಾರು ೨೦೦೦ ಮಂದಿ ಲಸಿಕಾ ಕೇಂದ್ರದಲ್ಲಿ ಸೇರಿದ್ದರು. ಅಷ್ಟು ಜನರು ಇದ್ದಾಗ್ಯೂ ಪೊಲೀಸರ ನಿಯೋಜನೆ ನಡೆದಿರಲಿಲ್ಲ ಎನ್ನಲಾಗಿದೆ. ನೂಕುನುಗ್ಗಲು ಜರಗಿದ ಬಳಿಕ ಪೊಲೀಸರನ್ನು ನಿಯೋಜಿಸಲಾಗಿದೆ.
ಪೊಲೀಸರು ಮಾತ್ರ 20 ಜನರು ಗಾಯಗೊಂಡಿದ್ದಾರೆ ಎಂದು ಹೇಳುತ್ತಿದ್ದು ಇದಕ್ಕೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಸುಳ್ಳು ಹೇಳುತ್ತಿದ್ದು ಘಟನೆಯಲ್ಲಿ 30 ಮಂದಿಗೆ ಗಾಯಗಳಾಗಿದ್ದು 8 ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ಆದೇಶಿಸಲಾಗಿದೆ.












































