National

ತಮಿಳುನಾಡು ಬಿಜೆಪಿ ಅಧ್ಯಕ್ಷ ಸಿಂಗಂ ಅಣ್ಣಾಮಲೈ ವಿರುದ್ಧ ಮುನಿಸಿಕೊಂಡು ಬಿಜೆಪಿ ಬಿಟ್ಟು ಎಐಎಡಿಎಂಕೆ ಸೇರಿದ 13 ಮುಖಂಡರು

ಚೆನ್ನೈ: ಬಿಜೆಪಿ ತಮಿಳುನಾಡು ಘಟಕ ಅಧ್ಯಕ್ಷ ಸಿಂಗಂ ಖ್ಯಾತಿಯ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಕಾರ್ಯವೈಖರಿ ಕುರಿತು ಬೇಸರಿಸಿಕೊಂಡು ಒಟ್ಟು 13 ಬಿಜೆಪಿ ಪದಾಧಿಕಾರಿಗಳು ಬುಧವಾರ ಪಕ್ಷ ತೊರೆದು ಮಿತ್ರ ಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಸೇರಿದ್ದಾರೆ.

ಬಿಜೆಪಿಯ ಐಟಿ ವಿಭಾಗಕ್ಕೆ ಸೇರಿದ 13 ಮುಖಂಡರು ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಪಕ್ಷ ಸೇರಿದ್ದಾರೆ. ಎಐಎಡಿಎಂಕೆ ಪಕ್ಷವು ಬಿಜೆಪಿ ನಾಯಕರನ್ನು ಖರೀದಿ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕ ಆರೋಪಿಸಿದ ಬೆನ್ನಲ್ಲೇ ಈ ಪಕ್ಷಾಂತರ ನಡೆದಿದೆ.

ಕಾರ್ಯನಿರ್ವಹಣೆ ಶೈಲಿ ವಿಚಾರದಲ್ಲಿ ಭಿನ್ನಾಭಿಪ್ರಾಯದಿಂದಾಗಿ ಪಕ್ಷ ಬಿಟ್ಟ ಬಿಜೆಪಿ ಐಟಿ ವಿಭಾಗದ ಜಿಲ್ಲಾಧ್ಯಕ್ಷ ಓರತಿ ಅನ್ಬರಸು, “ವರ್ಷಗಳಿಂದ ಬಿಜೆಪಿಗಾಗಿ ದುಡಿದಿದ್ದೇನೆ. ನಾನು ಯಾವುದೇ ಸ್ಥಾನಮಾನ ನಿರೀಕ್ಷೆ ಮಾಡಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಪಕ್ಷದಲ್ಲಿನ ಘಟನೆಗಳನ್ನು ಪರಿಗಣಿಸಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನಮ್ಮ ನಾಯಕ ಮತ್ತು ಮಾಜಿ ಬಿಜೆಪಿ ರಾಜ್ಯ ಐಟಿ ವಿಂಗ್ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಅವರು ತೋರಿಸಿದ ಮಾರ್ಗವನ್ನು ನಾವು ಅನುಸರಿಸಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೆಲಸದ ಶೈಲಿ ವಿರುದ್ಧ ಪ್ರತಿಭಟಿಸಿ ಪಕ್ಷದ ಐಟಿ ವಿಭಾಗದ ಮುಖ್ಯಸ್ಥರಾಗಿದ್ದ ಸಿಟಿ ಆರ್ ನಿರ್ಮಲ್ ಕುಮಾರ್ ಅವರು ರಾಜೀನಾಮೆ ನೀಡಿ ಎಐಎಡಿಎಂಕೆ ಸೇರಿದ್ದರು. “ಪಕ್ಷಕ್ಕೆ ಹಲವು ವರ್ಷಗಳಿಂದ ಕೆಲಸ ಮಾಡಿರುವವರನ್ನು ನಿಕೃಷ್ಟ ಭಾವನೆಯಿಂದ ನೋಡುವುದೇ ಅಣ್ಣಾಮಲೈ ಅವರ ಕೆಲಸ. ಪಕ್ಷದಲ್ಲಿರುವ ಶೇ.90 ರಷ್ಟು ಮಂದಿಗೆ ನಾನು ಹೇಳುತ್ತಿರುವುದು ನಿಜ ಎಂದು ತಿಳಿದಿದೆ. ಆದರೆ ಸಾಮಾಜಿಕ ಜಾಲತಾಣದ ಸ್ನೇಹಿತರು ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾರೆ. ಈ ವಾರ್ ರೂಮ್ ಬಣಗಳು ನನ್ನಂತೆ ಎಷ್ಟು ಮಂದಿಯನ್ನು ಓಡಿಸುತ್ತವೆ ಎಂಬುದನ್ನು ಕಾದು ನೋಡೋಣ”ಎಂದು ರಾಜೀನಾಮೆ ಬಳಿಕ ನಿರ್ಮಲ್ ಕುಮಾರ್ ಹೇಳಿಕೆ ನೀಡಿದ್ದರು.

Exit mobile version