
ಥೇನಿ: ತಮಿಳುನಾಡಿನ ಥೇನಿ ಜಿಲ್ಲೆಯಲ್ಲಿ ಎಂಟು ದಲಿತ ಕುಟುಂಬಗಳಿಗೆ ಸೇರಿದ ಒಟ್ಟು ನಲವತ್ತು ಜನ ಹಿಂದೂಗಳು ಇಸ್ಲಾಂ ಮತಕ್ಕೆ ಮತಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ.
ಥೇಣಿಯ ಬೋಡಿನಾಯಕನೂರು ಸಮೀಪದ ಡೊಂಬುಚೇರಿ ಗ್ರಾಮದಲ್ಲಿ ಈ ಸಾಮೂಹಿಕ ಮತಾಂತರ ನಡೆದಿದೆ. ಇಸ್ಲಾಂಗೆ ಮತಾಂತರಗೊಂಡ ನಲವತ್ತು ಮಂದಿ ತಮ್ಮ ಗ್ರಾಮದಲ್ಲಿ ದೊಡ್ಡ ಜಾತಿಯ ಜನರ ಕಿರುಕುಳದಿಂದಾಗಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡಿದ್ದೇವೆ ಎಂದು ಆರೋಪಿಸಿದ್ದಾರೆ.
ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರಲ್ಲಿ ಒಬ್ಬರಾದ ವೀರಲಕ್ಷ್ಮಿ ಮತಾಂತರದ ನಂತರ ಹೆಸರನ್ನು ರಹೀಮಾ ಎಂದು ಬದಲಾಯಿಸಿದ್ದು, ತನ್ನ ಗ್ರಾಮದ ಪ್ರಬಲ ಜಾತಿಯ ಜನರು ದೀಪಾವಳಿ ಸಂದರ್ಭದಲ್ಲಿ ತನ್ನ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನನ್ನ ಪತಿ ಬೈಕ್ ಹೊಂದಿದ ಕಾರಣಕ್ಕಾಗಿ ನವೆಂಬರ್ 4 ರಂದು ಪ್ರಬಲ ಜಾತಿಯವರು ಹಲ್ಲೆ ನಡೆಸಿದ್ದಾರೆ. ನಮ್ಮ ಹೆಣ್ಣುಮಕ್ಕಳು ಶಾಲೆಗೆ ಹೋಗುವಾಗ ಜಾತಿ ಹೆಸರಿಟ್ಟು ಚುಡಾಯಿಸುವುದನ್ನು ನೋಡಿದ್ದೇನೆ. ನಾವು ಮುಸ್ಲಿಮರಾಗಲು ಇದೇ ಕಾರಣ. ನಾನು ನನ್ನ ಹೆಸರನ್ನು ವೀರಲಕ್ಷ್ಮಿಯಿಂದ ರಹೀಮಾ ಎಂದು ಬದಲಾಯಿಸಿದ್ದೇನೆ” ಎಂದು ಅವರು ಹೇಳಿದರು.
ಆಕೆಯ ಪತಿ ಈಗ ಮೊಹಮದ್ ಇಸ್ಮಾಯಿಲ್ ಆಗಿ ಹೆಸರು ಬದಲಾಯಿಸಿಕೊಂಡಿರುವ ಕಲೈಕಣ್ಣನ್ ಅವರು, “ನಾನು ಹಿಂದೂವಾಗಿ ಜನಿಸಿದೆ. ಆದರೆ ಬಾಲ್ಯದಿಂದಲೂ ಜಾತಿ ಆಧಾರಿತ ದೌರ್ಜನ್ಯಗಳನ್ನು ಎದುರಿಸುತ್ತಿದ್ದೇನೆ. ನನಗೆ ಪ್ರಬಲ ಜಾತಿಯ ಜನರ ದೇವಸ್ಥಾನದೊಳಗೆ ಪ್ರವೇಶ ನೀಡಲಿಲ್ಲ ಮತ್ತು ಅವರು ನಾವು ಸಮಾನರು ಎಂದು ಪರಿಗಣಿಸಲಿಲ್ಲ” ಎಂದು ಹೇಳಿದರು.
ಈಗ ಮುಸ್ತಫಾ ಆಗಿರುವ ನಾಗರಾಜ್ ಎಂಬವರು ಮಾತನಾಡಿ, “ಕನಿಷ್ಠ ಆರು ತಿಂಗಳಿಗೊಮ್ಮೆಯಾದರೂ ಇಲ್ಲಿ ಜಾತಿ ಗಲಭೆಗಳು ನಡೆಯುತ್ತವೆ. ಪ್ರತಿ ಸಲ ಪ್ರಬಲ ಜಾತಿಯ ಜನರು ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ ಮತ್ತು ನಮ್ಮ ಸಾಮಾನುಗಳನ್ನು ಹಾನಿಗೊಳಿಸುತ್ತಾರೆ. ನಾವು ಇದನ್ನು ಏಕೆ ಎದುರಿಸಬೇಕು?” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.












































