National

ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದು ಮಕ್ಕಳಾಟ ಪ್ರದರ್ಶಿಸಿದ್ದ ತೇಜಸ್ವಿ ಸೂರ್ಯ: ಕ್ಷಮೆಯಾಚಿಸಿದ್ದಾರೆ ಎಂದ ವಿಮಾನಯಾನ ಸಚಿವ

ನವದೆಹಲಿ: ಡಿಸೆಂಬರ್ ತಿಂಗಳಲ್ಲಿ ಸಂಸದ ಇಂಡಿಗೋ ವಿಮಾನದಳ್ಳಿ ಪ್ರಯಾಣಿಸುವ ಸಂದರ್ಭ ತುರ್ತು ನಿರ್ಗಮನ ದ್ವಾರವನ್ನು ತೆರೆದು ತೀವ್ರ ಟೀಕೆಗೆ ಒಳಗಾಗಿದ್ದರು. ಈ ಘಟನೆಯಿಂದಾಗಿ ವಿಮಾನಯಾನ ಸುಮಾರು 2 ಗಂಟೆಗಳ ಕಾಲ ತಡವಾಗಿತ್ತು. ಈ ಘಟನೆ ಬಗ್ಗೆ ಸ್ವತಃ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೇ ವರದಿ ಮಾಡಿ ಕ್ಷಮೆಯಾಚಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಹೇಳಿದ್ದಾರೆ. ಈ ಮೂಲಕ ಸ್ವಪಕ್ಷದ ಸಂಸದನ ನೆರವಿಗೆ ಧಾವಿಸಿದ್ದಾರೆ.

ಡಿಸೆಂಬರ್ 10 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯ ಬಗ್ಗೆ ಬಿಜೆಪಿಯ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿಪಕ್ಷ ಕಾಂಗ್ರೆಸ್‌ನಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷವು ತೇಜಸ್ವಿ ಸೂರ್ಯ ಎಲ್ಲಾ ಕಡೆಯೂ ತನ್ನ ಮಕ್ಕಳಾಟ ಆಡಲು ಹೋಗುವುದೇಕೆ ಎಂದು ಟೀಕೆ ಮಾಡಿದೆ.

ಪ್ರಯಾಣಿಕರೊಬ್ಬರು ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಿದ ನಂತರ ಆಕಸ್ಮಿಕವಾಗಿ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದರು ಎಂದು ಇಂಡಿಗೋ ಮಂಗಳವಾರ ಹೇಳಿತ್ತು. ಆದರೆ ಆ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ಆ ವ್ಯಕ್ತಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ,ಬಿಜೆಪಿ ಯುವ ಮೋರ್ಚಾ ರಾಷ್ಟ್ರಾಧ್ಯಕ್ಷ ತೇಜಸ್ವೀ ಸೂರ್ಯ ಎಂಬುದು ಗೊತ್ತಾಗಿದೆ.

“ಈ ಹಠಾತ್ ಘಟನೆ ಸಂಭವಿಸಿದ ನಂತರ ತೇಜಸ್ವಿ ಸೂರ್ಯ ಅವರೇ ಆ ಬಗ್ಗೆ ವರದಿ ಮಾಡಿ ಕ್ಷಮೆ ಕೇಳಿದ್ದಾರೆ. ಅದರ ಆಧಾರದ ಮೇಲೆ ಸಂಪೂರ್ಣ ಪ್ರೋಟೋಕಾಲ್ ಅನ್ನು ಅನುಸರಿಸಲಾಗಿದೆ. ಡಿಜಿಸಿಎ ಸ್ವತಃ ತನಿಖೆ ಮಾಡಿದ ಬಳಿಕ ವಿಮಾನ ಟೇಕ್ ಆಫ್ ಆಗಿದೆ” ಎಂದು ವಿಮಾನಯಾನ ಸಚಿವರು ಹೇಳಿದ್ದಾರೆ.

Exit mobile version