
ಮಧ್ಯಪ್ರದೇಶ: ಬಿಜೆಪಿ ಪಕ್ಷ ತನ್ನ ಹಿರಿಯ ನಾಯಕರನ್ನು ಕಡೆಗಣಿಸುತ್ತಿರುವಂತೆಯೇ ಹಿರಿಯ ನಾಯಕರು ಪಕ್ಷದ ತಪ್ಪುಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ಕೊಡುವುದು ಸಾಮಾನ್ಯವಾಗಿದೆ. ಇದೀಗ ಬಿಜೆಪಿ ಹಿರಿಯ ನಾಯಕಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಸಾಧ್ವಿ ಉಮಾಭಾರತಿ ಅವರು ಸ್ವಪಕ್ಷದ ವಿರುದ್ಧವೇ ಗುಡುಗಿದ್ದಾರೆ. ಭಗವಾನ್ ರಾಮ ಮತ್ತು ಹನುಮಂತನನ್ನ ಪೂಜಿಸುವುದು ಬಿಜೆಪಿಯ ಹಕ್ಕುಸ್ವಾಮ್ಯವಲ್ಲ, ಕೇವಲ ಅವರಿಗೇ ಬರೆದುಕೊಟ್ಟಿಲ್ಲ ಎಂದು ಉಮಾಭಾರತಿ ಹೇಳಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ರಾಜ್ಯದಲ್ಲಿ ಹನುಮಂತನ ಮಂದಿರ ನಿರ್ಮಾಣ ಮಾಡುವುದಾಗಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉಮಾಭಾರತಿ ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗಷ್ಟೇ ಅವರು ಬಿಜೆಪಿ ಮತದಾರರಿಗೆ ‘ಸುತ್ತಮುತ್ತ ನೋಡಿ’ ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಬೇಕು ಎಂದು ಹೇಳಿದ್ದರು.
“ನಾನು ರಾಜ್ಯದಲ್ಲಿ ಮದ್ಯಪಾನ ನಿಷೇಧದ ಬೇಡಿಕೆ ಇಟ್ಟಿದ್ದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ರಾಜ್ಯ ಸರ್ಕಾರ ತಮ್ಮನ್ನು ಮೂಲೆಗುಂಪು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ, ಉಮಾಭಾರತಿ ಮಧ್ಯಪ್ರದೇಶದಲ್ಲಿ ಮದ್ಯ ನಿಷೇಧಿಸುವಂತೆ ಆಗ್ರಹಿಸಿ ಮದ್ಯದಂಗಡಿಗಳ ಮೇಲೆ ಕಲ್ಲು ಎಸೆದು ಗಮನ ಸೆಳೆದಿದ್ದರು.
ಮತ್ತೊಂದೆಡೆ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ವಿವಾದಾತ್ಮಕ ಹೇಳಿಕೆಯನ್ನು ಬೆಂಬಲಿಸಿದ ಉಮಾಭಾರತಿ, ಹಿಂದೂಗಳು ತಮ್ಮ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಬೇಕು ಎಂದು ಕೂಡ ಹೇಳಿದ್ದಾರೆ.












































