
ನವದೆಹಲಿ: ರಾಷ್ಟ್ರಪತಿ ಹುದ್ದೆಗೆ ಬಹುತೇಕ ದ್ರೌಪದಿ ಮುರ್ಮು ಗೆಲುವು ಖಚಿತವಾಗಿರುವಂತೆಯೇ ಉಪರಾಷ್ಟ್ರಪತಿ ಹುದ್ದೆಗಾಗಿ ಎನ್ ಡಿಎ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಸಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ತನ್ನ ರಾಜ್ಯಸಭಾ ಅವಧಿ ಮುಗಿದ ಕಾರಣ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಬಹುದು ಎಂಬ ಲೆಕ್ಕಾಚಾರ ಎದ್ದಿದೆ.
ಆಡಳಿತರೂಢ ಬಿಜೆಪಿ ಭಾರತದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ಉಪರಾಷ್ಟ್ರಪತಿ ಹುದ್ದೆಗೆ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಯನ್ನು ಕಣಕ್ಕಿಳಿಸುವ ಬಗ್ಗೆ ಚಿಂತಿಸುತ್ತಿದೆ. ಈಗಾಗಲೇ ನಜ್ಮಾ ಹೆಫ್ತುಲ್ಲಾ, ಕೇರಳ ರಾಜ್ಯಪಾಲ ಆರಿಫ್ ಖಾನ್, ಸಿಖ್ ಸಮುದಾಯದ ಅಮರಿಂದರ್ ಸಿಂಗ್ ಹಾಗು ಮುಕ್ತಾರ್ ಅಬ್ಬಾಸ್ ನಖ್ವಿ ಹೆಸರುಗಳು ಉಪರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯ ನೆಲೆಯಲ್ಲಿ ಕೇಳಿಬರುತ್ತಿವೆ.
ಪಕ್ಷದ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಮಾಡಿದ ಹೇಳಿಕೆಗಳಿಂದ ಬಿಜೆಪಿ ಇರಿಸುಮುರಿಸು ಎದುರಿಸುತ್ತಿದೆ ಎಂದು ನಂಬಿರುವ ಕೇಂದ್ರ ಬಿಜೆಪಿ ನಾಯಕರು ಮುಸ್ಲಿಂ ಸಮುದಾಯವನ್ನು ಒಲಿಸಿಕೊಳ್ಳಲು ಮುಸ್ಲಿಂ ಅಭ್ಯರ್ಥಿಗೆ ಮನೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಮುಸ್ಲಿಮ್ ಸಮುದಾಯ ಬಿಜೆಪಿಗೆ ಮತ ಚಲಾಯಿಸದಿದ್ದರೂ ಬಿಜೆಪಿ ಮಾತ್ರ ಸದಾ ಓಲೈಕೆ ಮುಂದುವರೆಸುತ್ತಿರುವಂತೆ ಕಾಣುತ್ತಿದೆ.
ಉಪರಾಷ್ಟ್ರಪತಿಯಾಗಿ ಎಂ ವೆಂಕಯ್ಯ ನಾಯ್ಡು ಅವರ ಅವಧಿ ಆಗಸ್ಟ್ 10 ರಂದು ಕೊನೆಗೊಳ್ಳುತ್ತದೆ. ಜುಲೈ 19 ಉಪ ರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ.












































