
ತೈಪೆ/ ತೈವಾನ್: ಚೀನಾವು ತೈವಾನ್ ಗಡಿಯಲ್ಲಿ ಸೇನೆಯನ್ನು ಜಮಾಯಿಸುತ್ತಿರುವ ಮಧ್ಯೆ ಒಂದು ವೇಳೆ ಚೀನಾದಿಂದ ತೈವಾನ್ ಮೇಲೆ ದಾಳಿಯಾದರೆ ತೈವಾನ್ ಅನ್ನು ರಕ್ಷಿಸಲು ಅಮೇರಿಕ ತನ್ನ ಮಿಲಿಟರಿಯನ್ನು ಬಳಸುವುದಾಗಿ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಇದು ಪೂರ್ವ ಏಷ್ಯಾದ ಪ್ರಜಾಪ್ರಭುತ್ವದ ಕಡೆಗೆ ಅಮೇರಿಕಾದ ದಶಕಗಳ ಕಾಲದ ಅಸ್ಪಷ್ಟ ನೀತಿಯಿಂದ ದೂರ ಸರಿಯುವುದನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಬಿಡೆನ್ ಕಳೆದ ವರ್ಷ ಅಮೇರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪೂರ್ವ ಏಷ್ಯಾಕ್ಕೆ ತನ್ನ ಮೊದಲ ಪ್ರವಾಸದಲ್ಲಿ ಜಪಾನ್‌ಗೆ ಭೇಟಿ ನೀಡಿದ ವೇಳೆ ಸೋಮವಾರ ಈ ಹೇಳಿಕೆಗಳನ್ನು ನೀಡಿದ್ದಾರೆ. ಜಪಾನಿನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗಿನ ಪತ್ರಿಕಾಗೋಷ್ಠಿಯಲ್ಲಿ ತೈವಾನ್ ಬಗ್ಗೆ ವರದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಬಿಡೆನ್, “ತೈವಾನ್ ಅನ್ನು ಸಮರ್ಥಿಸುವುದು ನಾವು ಮಾಡಿದ ಬದ್ಧತೆ. ತೈವಾನ್ ಅನ್ನು ಬಲವಂತವಾಗಿ ತೆಗೆದುಕೊಳ್ಳಬಹುದು ಎಂಬ ಚೀನಾದ ಕಲ್ಪನೆಯು “ಸೂಕ್ತವಲ್ಲ” ಎಂದು ಹೇಳಿದರು.
ತೈವಾನ್ ಜಲಮಾರ್ಗ ಗಡಿಯಲ್ಲಿ ಹೆಚ್ಚುತ್ತಿರುವ ಚೀನೀ ಸೈನಿಕರ ವಿಹಾರ, ನೌಕಾ ವ್ಯಾಯಾಮಗಳು ಮತ್ತು ಇತರ ಪವರ್ ಪ್ರೊಜೆಕ್ಷನ್‌ಗಳನ್ನು ಉಲ್ಲೇಖಿಸುತ್ತಾ “ಚೀನಾವು ಇಷ್ಟು ಹತ್ತಿರದಲ್ಲಿ ಹಾರುವ ಮೂಲಕ ಮತ್ತು ಎಲ್ಲಾ ಕುಶಲತೆಗಳನ್ನು ಕೈಗೊಳ್ಳುವ ಮೂಲಕ ಇದೀಗ ಅಪಾಯದೊಂದಿಗೆ ಫ್ಲರ್ಟಿಂಗ್ ಮಾಡುತ್ತಿದೆ” ಎಂದು ಬಿಡೆನ್ ಅವರು ಎಚ್ಚರಿಸಿದ್ದಾರೆ.
ಬಿಡೆನ್ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಚೀನಾ,”ರಾಷ್ಟ್ರೀಯ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವಲ್ಲಿ ಚೀನಾದ ಜನರ ದೃಢ ಸಂಕಲ್ಪ ಮತ್ತು ಬಲವಾದ ಸಾಮರ್ಥ್ಯವನ್ನು ಯಾರೂ ಕಡಿಮೆ ಅಂದಾಜು ಮಾಡಬಾರದು” ಎಂದು ಹೇಳಿದೆ.












































