National

ಯುಪಿ ಪ್ರಯಾಗ್‌ರಾಜ್‌ನಲ್ಲಿ ಮುಂದುವರೆದ ಬುಲ್ಡೋಜರ್ ಕಾರ್ಯಾಚರಣೆ: ಜೆಎನ್‌ಯು ವಿದ್ಯಾರ್ಥಿ ನಾಯಕಿಯ ಮನೆ ಧ್ವಂಸ

ಪ್ರಯಾಗ್ ರಾಜ್/ ಉತ್ತರ ಪ್ರದೇಶ: ಉತ್ತರ ಪ್ರದೇಶದ ಯೋಗಿ ಸರ್ಕಾರದ ಬುಲ್ಡೋಜರ್‌ಗಳು ಭಾನುವಾರ ಕೂಡ ಕಾರ್ಯಾಚರಣೆ ಮುಂದುವರೆಸಿದ್ದು ಪ್ರಯಾಗ್‌ರಾಜ್ ಹಿಂಸಾಚಾರ ಆರೋಪಿಯ ಮನೆಯನ್ನು ಇಂದು ಧ್ವಂಸಗೊಳಿಸಿದವು. ಭಾರೀ ಭದ್ರತೆಯ ನಡುವೆ, ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರ (ಪಿಡಿಎ) ಮತ್ತು ಯುಪಿ ಪೊಲೀಸರು ನಗರದಲ್ಲಿ ಕಳೆದ ಶುಕ್ರವಾರದ ಪ್ರಾರ್ಥನೆಯ ನಂತರದ ದಂಗೆಯ ಮಾಸ್ಟರ್‌ಮೈಂಡ್ ಎಂದು ಹೇಳಲಾದ ಜಾವೇದ್ ಅಹಮದ್ ಎಂಬವನ ಮನೆಯನ್ನು ಕೆಡವಿದರು.

ಜಾವೇದ್ ಅಹ್ಮದ್ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿನಿ ಅಫ್ರೀನ್ ಫಾತಿಮಾ ಅವರ ತಂದೆ ಮತ್ತು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷನಾಗಿದ್ದಾನೆ. ಸಿಎಎ ಹಾಗು ಎನ್.ಆರ್.ಸಿ ಪ್ರತಿಭಟನೆಗಳ ಸಂದರ್ಭದಲ್ಲಿ ಅಫ್ರೀನ್ ದೆಹಲಿಯ ಶಾಹೀನ್‌ಬಾಗ್‌ನಲ್ಲಿ ಸಕ್ರಿಯಳಾಗಿದ್ದಳು ಹಾಗೆಯೇ ಜಾವೇದ್ ಅಹ್ಮದ್ ಕೂಡ ಹಲವೆಡೆ ಹಿಂಸಾಚಾರಗಳಿಗೆ ಕುಮ್ಮಕ್ಕು ನೀಡಿದ್ದ.

ಕಳೆದ ಶುಕ್ರವಾರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಯಾಗರಾಜ್ ಪೊಲೀಸರು ಭಾನುವಾರ ಅತಾಲಾ ಮಸೀದಿಯ ಇಮಾಮ್ ಮೌಲಾನಾ ಅಲಿ ಅಹ್ಮದ್ ಅವರನ್ನು ಬಂಧಿಸಿದ್ದಾರೆ. ಪ್ರಾರ್ಥನೆ ಮುಗಿಸಿ ಶುಕ್ರವಾರ ಅತಾಲಾ ಮಸೀದಿಯಿಂದ ಹೊರಬಂದ ನಂತರ ಪ್ರಯಾಗ್‌ರಾಜ್‌ನಲ್ಲಿ ಹಿಂಸಾಚಾರ ಪ್ರಾರಂಭವಾಯಿತು. ಪೊಲೀಸರ ಪ್ರಕಾರ ಇಮಾಮ್ ಮೌಲಾನಾ ಅಲಿ ಅಹ್ಮದ್ ಜನರನ್ನು ಪ್ರಚೋದಿಸಿದವರಲ್ಲಿ ಒಬ್ಬನಾಗಿದ್ದಾನೆ ಎಂದು ತಿಳಿದು ಬಂದಿದೆ.

ಪ್ರತಿಭಟನಾಕಾರರನ್ನು ಹತ್ತಿಕ್ಕಲು ಯುಪಿ ಸರಕಾರವು ಕಾನ್ಪುರದಲ್ಲಿ ಹಿಂಸಾಚಾರದ ಮಾಸ್ಟರ್ ಮೈಂಡ್ ಜಾಫರ್ ಹಯಾತ್ ಹಶ್ಮಿಗೆ ಸೇರಿದ ಮೂರು ಕಟ್ಟಡಗಳನ್ನು ವಶಪಡಿಸಿಕೊಂಡಿದೆ. ಕಳೆದ ಶುಕ್ರವಾರ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಒಂಬತ್ತು ಜಿಲ್ಲೆಗಳಲ್ಲಿ 306 ಜನರನ್ನು ಬಂಧಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version