National

2 ಕೋಮುಗಳ ನಡುವೆ ಭುಗಿಲೆದ್ದ ಹಿಂಸೆ: ಜೋಧ್‌ಪುರ ಉದ್ವಿಗ್ನ, ಕರ್ಫ್ಯೂ ಹೇರಿಕೆ

ಜೋದ್ಪುರ: ಸೋಮವಾರ ತಡರಾತ್ರಿ ಜೋಧ್‌ಪುರದ ಜಲೋರಿ ಗೇಟ್ ಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಯ ಮೇಲೆ ಧ್ವಜ ಹಾರಿಸುವ ಮತ್ತು ತೆಗೆಯುವ ವಿಚಾರದಲ್ಲಿ ಎರಡು ಕೋಮುಗಳ ಜನರ ನಡುವೆ ಘರ್ಷಣೆ ನಡೆದು ಕಲ್ಲು ತೂರಾಟಕ್ಕೆ ತಿರುಗಿ ಕೆಲವು ಪೊಲೀಸರು ಗಾಯಗೊಂಡ ಗಂಟೆಗಳ ನಂತರ, ಅದೇ ಪ್ರದೇಶದಲ್ಲಿ ಇಂದು ಮತ್ತೆ ಘರ್ಷಣೆ ಸಂಭವಿಸಿದೆ.

ಮಂಗಳವಾರ ಬೆಳಿಗ್ಗೆ ರಂಜಾನ್ ಪ್ರಾರ್ಥನೆಯ ನಂತರ ಗಲಭೆ ಭುಗಿಲೆದ್ದಿದ್ದು ಕರ್ಫ್ಯು ಹೇರಲಾಗಿದೆ. ಪರಿಸ್ಥಿತಿಯನ್ನು ಪರಿಶೀಲಿಸಲು ಮಂಗಳವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಜೋಧ್‌ಪುರದ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಗೆಹ್ಲೋಟ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೃಹ, ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಗೃಹ ಸಚಿವ ರಾಜೇಂದ್ರ ಸಿಂಗ್ ಯಾದವ್ ಸೇರಿದಂತೆ ರಾಜಸ್ಥಾನ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಹೆಲಿಕಾಪ್ಟರ್ ಮೂಲಕ ಜೋಧ್‌ಪುರಕ್ಕೆ ಕಳುಹಿಸಿದ್ದಾರೆ.

ಸೋಮವಾರ ರಾತ್ರಿಯ ಘರ್ಷಣೆಯ ನಂತರ ಅಶೋಕ್ ಗೆಹಲೋಟ್ ನೇತೃತ್ವದ ಸರಕಾರ ಸೂಕ್ತ ಭದ್ರತಾ ಕ್ರಮ ಕೈಗೊಳ್ಳದೇ ಇದ್ದ ಪರಿಣಾಮ ಮಂಗಳವಾರ ಮತ್ತೆ ಗಲಭೆ ಭುಗಿಲೆದ್ದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಪೊಲೀಸರ ಪ್ರಕಾರ, ಈದ್ ದಿನದಂದು ಹಿಂದೂಗಳ ಪರಶುರಾಮ ಜಯಂತಿಯ ಸಂದರ್ಭದಲ್ಲಿ ಹಾಕಲಾದ ಕೆಲವು ಧ್ವಜಗಳ ಬಗ್ಗೆ ಸೋಮವಾರ ತಡರಾತ್ರಿ ಘರ್ಷಣೆ ಪ್ರಾರಂಭವಾಯಿತು. ನಮಾಜ್ ಮಾಡುವ ಪ್ರದೇಶದ ಬಳಿ ಪರಶುರಾಮನ ಧ್ವಜಗಳಿದ್ದವು. ಸ್ಥಳೀಯ ಮುಸ್ಲಿಂ ಸಮುದಾಯದವರು ಈದ್ ಸಂದರ್ಭದಲ್ಲಿ ಇಸ್ಲಾಂ ಧ್ವಜವನ್ನು ಹಾಕಿದ್ದರಿಂದ ಧ್ವಜಗಳ ಬಗ್ಗೆ ವಿವಾದ ಉಂಟಾಗಿದೆ ಎಂದು ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಹವಾ ಸಿಂಗ್ ಘುಮಾರಿಯಾ ಹೇಳಿದ್ದಾರೆ.

Exit mobile version