
ಕೋಲ್ಕತ್ತಾ: ಕೋಲ್ಕತ್ತಾದ ಹೋಟೆಲ್ ಒಂದರಲ್ಲಿ ಪಾಶ್ಕ್ಷದ ರಾಜ್ಯ ನಾಯಕರೊಡನೆ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಉಲ್ಲೇಖಿಸಿ ಪಕ್ಷದ ನಾಯಕರಿಗೆ ಮಮತಾ ಅವರಂತೆ ‘ಹೋರಾಡುವುದನ್ನು’ ಕಲಿಯುವಂತೆ ಹೇಳಿದರು. ಈ ಮೂಲಕ ಪಶ್ಚಿಮ ಬಂಗಾಲ ಬಿಜೆಪಿ ಮುಖಂಡರಿಗೆ ಕ್ಲಾಸ್ ತೆಗೆದುಕೊಂಡರು.
ಮಮತಾ ಅವರು ಈ ಹಿಂದಿನ ಸಿಪಿಐ (ಎಂ) ಸರ್ಕಾರದ ವಿರುದ್ಧ ತೀವ್ರ ಹೋರಾಟದ ನಂತರ, ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರು. ಅಂತಹ ಹೋರಾಟದ ಮನೋಭಾವ ನಿಮ್ಮಲ್ಲೂ ಮೂಡಬೇಕು ಎಂದು ಶಾ ಬಂಗಾಲ ಬಿಜೆಪಿಗರಿಗೆ ಪಾಠ ಮಾಡಿದ್ದಾರೆ. “ನನ್ನ ವಿರುದ್ಧ 50 ಪ್ರಕರಣಗಳಿದ್ದು, ಅವುಗಳಲ್ಲಿ ಹಲವಾರು ಕೊಲೆ ಪ್ರಕರಣಗಳಿವೆ. ನೀವುಗಳು ಮಮತಾ ಬ್ಯಾನರ್ಜಿಯವರ ಹೋರಾಟವನ್ನು ನೋಡಬೇಕು ಮತ್ತು ಮೌನವಾಗಿ ಕುಳಿತರೆ ಬಿಜೆಪಿಯು ಅಧಿಕಾರಕ್ಕೆ ಬರುತ್ತದೆ ಎಂದು ಭಾವಿಸುವವರು ಮನೆಗೆ ಮರಳಬೇಕು” ಎಂದು ಶಾ ಖಡಕ್ ಆಗಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ದೆಹಲಿಯಿಂದ ಬಿಜೆಪಿಯನ್ನು ಟಿಎಂಸಿ ವಿರುದ್ಧ ಹೋರಾಡುವಂತೆ ಮಾಡಬಹುದು ಎಂದು ಯಾವುದೇ ರಾಜ್ಯ ನಾಯಕರು ಭಾವಿಸಿದರೆ ಅದು ತಪ್ಪು. ಸಂಘಟನೆಯನ್ನು ಬಲಪಡಿಸಲು ರಾಜ್ಯ ನಾಯಕರು ತಳ ಮಟ್ಟಕ್ಕೆ ತಲುಪಬೇಕು. ಇನ್ನು ಮುಂದೆ ನಿಯಮಿತವಾಗಿ ರಾಜ್ಯಕ್ಕೆ ಭೇಟಿ ನೀಡಿ ಪಕ್ಷದ ಬೆಳವಣಿಗೆ ಕುರಿತು ಪರಿಶೀಲಿಸುವ ಕೆಲಸ ಮಾಡುತ್ತೇನೆ ಎಂದು ಷಾ ಅವರು ಹೇಳಿದರು.












































