
ಕೊಲ್ಕೊತ್ತಾ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಿಜೆಪಿ ಪಕ್ಷ ಸೇರುತ್ತಾರೆಂಬ ಸುದ್ದಿಗೆ ಮತ್ತೆ ರೆಕ್ಕೆ ಪುಕ್ಕ ಬಂದಿದ್ದು, ಬಂಗಾಲ ಪ್ರವಾಸದಲ್ಲಿರುವ ಅಮಿತ್ ಶಾ ಅವರಿಗೆ ಗಂಗೂಲಿ ಮನೆಯಲ್ಲಿ ಆಯೋಜಿಸಿದ್ದ ಭೋಜನ ಕೂಟ ಇವಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಕೇಂದ್ರ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಬಿಸಿಸಿಐ ಪಧಾಧಿಕಾರಿ ಆಗಿರುವ ಕಾರಣ ಸೌರವ್ ಗಂಗೂಲಿ ಅವರ ಮನೆಯಲ್ಲಿ ಭೋಜನ ಕೂಟ ಆಯೋಜಿಸಲಾಗಿತ್ತು. ಇದೊಂದು ಸೌಜನ್ಯದ ಕೂಟ ಅಷ್ಟೇ ಎಂದು ಗಂಗೂಲಿ ಕುಟುಂಬದ ಮೂಲಗಳು ತಿಳಿಸಿವೆ. ಈ ಬಗ್ಗೆ ಸ್ವತಃ ಮಾತನಾಡಿದ ಗಂಗೂಲಿ, ಸಭೆಯಲ್ಲಿ ರಾಜಕೀಯವಾಗಿ ಏನೂ ಮಾತುಕತೆ ನಡೆದಿಲ್ಲ. ಸುಮಾರು ವರ್ಷಗಳಿಂದ ಅಮಿತ್ ಶಾ ಅವರನ್ನು ಬಲ್ಲೆ ಮತ್ತು ಹಲವಾರು ಬಾರಿ ಭೇಟಿಯಾಗಿದ್ದೇನೆ ಎಂದು ಹೇಳಿದರು.
ಈ ಹಿಂದೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭ ಗಂಗೂಲಿ ಬಿಜೆಪಿ ಸೇರುತ್ತಾರೆ, ಚುನಾವಣೆ ದಾದಾ ವರ್ಸಸ್ ದೀದಿ ಆಗಲಿದೆ ಅನ್ನುವ ಸುದ್ದಿ ತಾರಕಕ್ಕೆ ಹೋಗಿತ್ತು. ಆದರೆ ಈ ಸುದ್ದಿಯನ್ನ ಸೌರವ್ ಗಂಗೂಲಿ ತಳ್ಳಿಹಾಕುವ ಮೂಲಕ ಊಹಾಪೋಹಕ್ಕೆ ತೆರೆ ಎಳೆದಿದ್ದರು. 2015 ರಿಂದಲೂ ಬಂಗಾಳದಲ್ಲಿ ಗಂಗೂಲಿ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇದ್ದು ಗಂಗೂಲಿ ಮಾತ್ರ ನಿರಾಕರಿಸುತ್ತಲೇ ಬರುತ್ತಿದ್ದಾರೆ. ಆದರೆ ಗಂಗೂಲಿ ಅವರು ಬಿಜೆಪಿ ನಾಯಕರೊಡನೆ ಆಪ್ತವಾಗಿರುವುದು ಮಾತ್ರ ಸುಳ್ಳಲ್ಲ.












































