
ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷ ಅದ್ಭುತ ಗೆಲುವೇನೋ ಸಾಧಿಸಿತು. ಆದರೆ ಮುಖ್ಯಮಂತ್ರಿ ಮುಖವಾಗಿದ್ದ ಮಮತಾ ಬ್ಯಾನರ್ಜಿ ಮಾತ್ರ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲು ಕಾಣುವಂತಾಗಿತ್ತು. ಈಗ ಉಪಚುನಾವಣೆಯಲ್ಲಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗುವ ಅನಿವಾರ್ಯತೆಯಲ್ಲಿ ಮಮತಾ ಬ್ಯಾನರ್ಜಿ ಇದ್ದಾರೆ. ಇಲ್ಲಿಯೂ ಮಮತಾರನ್ನ ಸೋಲಿಸುವ ಪಣತೊಟ್ಟಿರುವ ಬಿಜೆಪಿ ಈಗಿನಿಂದಲೇ ತನ್ನ ಗೇಮ್ ಪ್ಲಾನ್ ಆರಂಭಿಸಿದೆ.
ಸಂವಿಧಾನದ ಪ್ರಕಾರ, ಮುಖ್ಯಮಂತ್ರಿಯೊಬ್ಬರು ಶಾಸಕಾಂಗ ಸಭೆಯ ಸದಸ್ಯರಲ್ಲದಿದ್ದರೆ, ಅವರು ಆರು ತಿಂಗಳೊಳಗೆ ಚುನಾವಣೆಯಲ್ಲಿ ಗೆದ್ದು ಶಾಸಕಾಂಗದ ಸದಸ್ಯರಾಗಬೇಕಾಗುತ್ತದೆ. ನಂದಿಗ್ರಾಮದಲ್ಲಿ ಹತ್ತಿರ ಹತ್ತಿರ 2000 ಮತಗಳಿಂದ ಸೋತ ಮಮತಾ ಮುಂಬರುವ ಉಪಚುನಾವಣೆಯಲ್ಲಿ ದಕ್ಷಿಣ ಕೋಲ್ಕತ್ತಾದ ಭಬಾನಿಪುರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಭಬಾನಿಪುರದಿಂದ ಗೆದ್ದಿದ್ದ ಸೋವಾಂಡೇಬ್ ಚಟ್ಟೋಪಾಧ್ಯಾಯ ತಮ್ಮ ನಾಯಕಿಗೆ ಕ್ಷೇತ್ರವನ್ನು ಬಿಟ್ಟು ಕೊಟ್ಟಿರುವ ಕಾರಣ ಚಟ್ಟೋಪಾಧ್ಯಾಯ ಅವರು ಖಾರ್ದಾ ಕ್ಷೇತ್ರಕ್ಕೆ ಸ್ಥಳಾಂತರಗೊಳ್ಳಬಹುದು. ಖಾರ್ದದಲ್ಲಿ ವಿಜೇತ ಟಿಎಂಸಿ ಅಭ್ಯರ್ಥಿ ಚುನಾವಣೆಯ ನಂತರ ನಿಧನರಾಗಿದ್ದು ಆ ಕ್ಷೇತ್ರ ಈಗ ಖಾಲಿಯಾಗಿದೆ.
ಮಮತಾ ಬ್ಯಾನರ್ಜಿ ಉಪಚುನಾವಣೆಯನ್ನು ಆದಷ್ಟು ಬೇಗ ನಡೆಸಲು ಉತ್ಸುಕರಾಗಿದ್ದರೂ, ಬಿಜೆಪಿಗೆ ಈಗಲೇ ಚುನಾವಣೆ ನಡೆಯುವುದು ಬೇಕಾಗಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಇತ್ತೀಚಿನ ಸಭೆಯಲ್ಲಿ, ಕೋವಿಡ್ ಪರಿಸ್ಥಿತಿಯಿಂದಾಗಿ ಉಪಚುನಾವಣೆಗಳು ತಕ್ಷಣವೇ ನಡೆಯಬಾರದು ಎಂದು ಬಂಗಾಲ ಬಿಜೆಪಿ ಮನವಿ ಕೂಡ ಮಾಡಿದೆ.
ಸದ್ಯದ ಬಂಗಾಳದ ಮನಸ್ಥಿತಿ ಮಮತಾ ಪರವಾಗಿರುವುದರಿಂದ, ಉಪಚುನಾವಣೆ ಬಿಜೆಪಿಗೆ ಪ್ರಯೋಜನಕಾರಿಯಾಗುವುದಿಲ್ಲ. ಹಾಗಾಗಿ ಉಪಚುನಾವಣೆಯನ್ನು ನಿಗದಿತ 6 ತಿಂಗಳ ಅವಧಿಯ ಕೊನೆಯಲ್ಲಿ ನಡೆಸುವಂತೆ ಮಾಡಿ, ಆ ಅವಧಿಯಲ್ಲಿ ಮಮತಾ ಪರ ಇರುವ ಅಲೆಯನ್ನು ಕೊಂಚ ಮಟ್ಟಿಗೆ ತಗ್ಗಿಸುವುದು ಬಿಜೆಪಿಯ ಗೇಮ್ ಪ್ಲಾನ್.