
ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಬಿವೈ ವಿಜಯೇಂದ್ರ ಅವರ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಲು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೋರ್ ಕಮಿಟಿ ನಿರ್ಧಾರ ತೆಗೆದುಕೊಂಡಿದೆ.
ಜೂನ್ 3 ರಂದು ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ವಿಜಯೇಂದ್ರ ಅವರ ಹೆಸರು ಒಪ್ಪಿಗೆ ಪಡೆದರೆ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಶಾಸಕರಾಗಿ ವಿಧಾನ ಮಂಡಲಕ್ಕೆ ಪಾದಾರ್ಪಣೆ ಮಾಡುವಂತಾಗುತ್ತದೆ.
ವಿಜಯೇಂದ್ರ ಪರವಾದ ಸಕಾರಾತ್ಮಕ ಬೆಳವಣಿಗೆಯು ಕರ್ನಾಟಕ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲು ದಾರಿ ಮಾಡಿಕೊಡಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಉಪಚುನಾವಣೆಗಳಲ್ಲಿ ತನ್ನ ಸಾಮರ್ಥ್ಯ ಸಾಬೀತು ಮಾಡಿರುವ ವಿಜಯೇಂದ್ರ ಅವರನ್ನು ಮುಂಬರುವ ಚುನಾವಣೆಯಲ್ಲಿ ಪ್ರಮುಖ ಯುವ ನಾಯಕ ಎಂಬುದನ್ನು ಬಿಂಬಿಸಲು ತಯಾರಿ ನಡೆಸಲಾಗಿದೆ. ಆದರೆ ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ವಿಜಯೇಂದ್ರ ಅವರು ಸೂಪರ್ ಮುಖ್ಯಮಂತ್ರಿ ಆಗಿದ್ದರು ಅನ್ನುವ ಮಾತುಗಳು ವಿಜಯೇಂದ್ರ ಅವರಿಗೆ ಕೊಂಚ ಹಿನ್ನಡೆ ತರಬಹುದಾಗಿದೆ. ಅದನ್ನೇ ವಿಜಯೇಂದ್ರ ವಿರೋಧಿಗಳು ಬಳಸಿಕೊಂಡು ಅವರ ಕಾಲು ಎಳೆಯುವ ಸಾಧ್ಯತೆಗಳೂ ಇಲ್ಲದ್ದಿಲ್ಲ.
ವಿಜಯೇಂದ್ರ ಅವರ ತಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 15 ವಿಧಾನಸಭಾ ಉಪಚುನಾವಣೆಗಳಲ್ಲಿ 12 ರಲ್ಲಿ ವಿಜಯೇಂದ್ರ ಅವರ ನಾಯಕತ್ವದಲ್ಲಿ ಬಿಜೆಪಿ ಗೆದ್ದಿದೆ. ಈ ವಿಜಯಗಳಲ್ಲಿ ಪ್ರಮುಖವಾದುದು ಕೆ.ಆರ್. ಪೇಟೆ ಮತ್ತು ಸಿರಾ ವಿಧಾನಸಭಾ ಕ್ಷೇತ್ರಗಳಲ್ಲಿನ ಗೆಲುವು. ಈ ಹಿಂದೆ ಈ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ತಮ್ಮ ಠೇವಣಿ ಉಳಿಸುವಲ್ಲಿ ಕೂಡ ವಿಫಲರಾಗಿದ್ದರು. ಅದರಲ್ಲೂ ಕೆ.ಆರ್. ಪೇಟೆಯ ಕ್ಷೇತ್ರದಲ್ಲಿ ಒಕ್ಕಲಿಗರೇ ಪ್ರಾಬಲ್ಯ ಹೊಂದಿದ್ದರೂ ಬಿಜೆಪಿಯನ್ನು ಗೆಲ್ಲಿಸಿದ್ದು ಇತರ ಸಮುದಾಯಗಳಲ್ಲೂ ವಿಜಯೇಂದ್ರ ಪ್ರಭಾವ ಇದೆ ಎಂಬುದು ಸಾಬೀತಾಗಿದೆ.
ಸದ್ಯಕ್ಕೆ ಜೂನ್ 3 ರಂದು ನಡೆಯಲಿರುವ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.












































