Political

ಎರಡನೇ ಇನಿಂಗ್ಸ್ ಆರಂಭಿಸಿದ ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ: ಬಿಜೆಪಿಯಲ್ಲಿ ತಳಮಳ

ಬೆಂಗಳೂರು: ರಾಜಕೀಯದಿಂದ ಅನಿವಾರ್ಯವಾಗಿ ದೂರವಾಗಿ, ಬಿಜೆಪಿಯಿಂದ ಮೂಲೆಗುಂಪಾಗಿದ್ದ ಬಿಜೆಪಿಯ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಇದೀಗ ಪಕ್ಷದ ವಿರುದ್ಧವೇ ಸೆಟೆದು ನಿಂತಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡುವ ಮೂಲಕ ರಾಜಕೀಯದ ಎರಡನೇ ಇನ್ನಿಂಗ್ ಗೆ ರೆಡಿಯಾಗಿದ್ದಾರೆ. ಹೊಸ ಪಕ್ಷಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂದು ಹೆಸರಿಡಲಾಗಿದೆ.

ಭಾನುವಾರ ಬೆಳಗ್ಗೆ ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಧೀಮಂತ ನಾಯಕ, ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಇಂದು ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸುತ್ತೇನೆ. ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು. 18ನೇ ವಯಸ್ಸಿನಿಂದಲೇ ಬಸವಣ್ಣನವರ ಕಾಯಕವೇ ಕೈಲಾಸ ಎಂಬುದನ್ನು ನಂಬಿಕೊಂಡು ಬಂದವನು ನಾನು ಎಂದು ಹೇಳಿದರು.

“ರಾಜ್ಯದಾದ್ಯಂತ ಹೊಸ ಪಕ್ಷವನ್ನು ಸಂಘಟನೆ ಮಾಡುತ್ತೇನೆ. ರಾಜ್ಯದ ಪ್ರತಿಯೊಂದು ಮನೆಗೆ ತೆರಳುತ್ತೇನೆ. ನನ್ನ ಜೊತೆ ಗೆಳೆಯ ಶ್ರೀರಾಮುಲು ಅವರಿಗೆ ಬರುವಂತೆ ಹೇಳಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಮುಂದಿನ ದಿನಗಳಲ್ಲಿ ನನ್ನ ಪತ್ನಿ ಅರುಣಾ ಲಕ್ಷ್ಮಿ ಅವರು ಸಹ ಪಕ್ಷ ಸಂಘಟನೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಏನೇ ಅಡೆತಡೆ ಬಂದರೂ ಮುನ್ನಡೆಯುವೆ. ಕರ್ನಾಟಕ ರಾಜ್ಯದ ಅಭಿವೃದ್ಧಿಯೇ ನನ್ನ ಗುರಿ” ಎಂದು ರೆಡ್ಡಿ ಹೇಳಿದರು.

‘ರಾಜ್ಯ ರಾಜಕಾರಣದಲ್ಲಿ ನನ್ನವರು ಎಂದುಕೊಂಡವರಿಂದಲೇ ಮೋಸ ಹೋದೆ. ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನ ಸಿಗದ ಹಿನ್ನಲೆಯಲ್ಲಿ ಹೊಸ ಪಕ್ಷ ಸ್ಥಾಪಿಸಬೇಕಾಯಿತು. ಕಷ್ಟದಲ್ಲಿ ಯಾರೂ ನನ್ನ ಜೊತೆ ನಿಂತಿಲ್ಲ. ಇದನ್ನು ನನ್ನ ಸ್ನೇಹಿತರು ಈಗಲೂ ಹೇಳುತ್ತಾರೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಬಿಟ್ಟು ಇನ್ನು ಯಾವ ನಾಯಕರು ನನ್ನ ಮನೆಗೆ ಬಂದಿಲ್ಲ. ಅವರಿಬ್ಬರು ಮಾತ್ರ ನನಗೆ ಧೈರ್ಯ ಹೇಳಿದರು. ಅವರನ್ನು ನಾನು ನೆನಪು ಮಾಡಿಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ. ಗಂಗಾವತಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ.’ ಎಂದು ರೆಡ್ಡಿ ಹೇಳಿದರು.

ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ರೆಡ್ಡಿ ಅವರು ಹೊಸ ಪಕ್ಷ ಘೋಷಣೆ ಮಾಡಿರುವುದು ಬಿಜೆಪಿಯಲ್ಲಿ ತಳಮಳಕ್ಕೆ ಕಾರಣವಾಗಿದೆ. ಬಳ್ಳಾರಿ, ವಿಜಯನಗರ, ಕೊಪ್ಪಳ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ರೆಡ್ಡಿ ಪ್ರಭಾವ ಇದ್ದು ಇದು ಬಿಜೆಪಿ ಮುಳುವಾಗಿ ಕಾಂಗ್ರೆಸ್ಸಿಗೆ ಲಾಭವಾಗುವ ಸಾಧ್ಯತೆಯಿದೆ.

Exit mobile version