
ಬೆಂಗಳೂರು: ಬಿಜೆಪಿಯ ಹಲವು ಸಚಿವರು, ಶಾಸಕರು ತಮ್ಮ ಸಂಪರ್ಕದಲ್ಲಿರುವುದಾಗಿ ಕಾಂಗ್ರೆಸ್ ನಾಯಕರು ಇತ್ತೀಚಿಗೆ ನೀಡಿದ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ, ರಾಜ್ಯ ಸರ್ಕಾರದ ಸಚಿವರಾದ ಆನಂದ್ ಸಿಂಗ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸೋಮವಾರ ಬೆಳಗ್ಗೆ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
.
ಸರ್ಕಾರೀ ವಾಹನವನ್ನು ಬಿಟ್ಟು ಖಾಸಗಿ ಕಾರಿನಲ್ಲಿ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿರುವುದು ಪಕ್ಷಾಂತರದ ಊಹಾಪೋಹಕ್ಕೆ ರೆಕ್ಕೆ ಮೂಡಿಸಿದೆ.
ಆನಂದ್ ಸಿಂಗ್ ಭೇಟಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಯೋಜನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿರುವುದಾಗಿ ಹೇಳಿದ್ದಾರೆ. ರಾಜಕಾರಣ ಮಾಡುವುದಿದ್ದರೆ ಹೋಟೆಲ್ ಅಥವಾ ಅತಿಥಿ ಗೃಹಗಳಲ್ಲಿ ಮಾಡುತ್ತೇವೆ, ಮನೆಯಲ್ಲಿ ಮಾಡಲ್ಲ. ಪ್ರಸ್ತಾವಿತ ಪ್ರವಾಸೋದ್ಯಮ ಕಾರ್ಯಕ್ರಮದ ಬಗ್ಗೆ ವಿವರಣೆ ಪಡೆಯಲು ವೈಯಕ್ತಿಕವಾಗಿ ಆನಂದ್ ಸಿಂಗ್ ಅವರು ಬಂದಿದ್ದಾರೆ. ಅದನ್ನು ಬಿಟ್ಟು ಬೇರೆ ಏನೂ ಇಲ್ಲ ಎಂದು ಅವರು ಹೇಳಿದರು.
ತಾವೇ ಮುತುವರ್ಜಿ ವಹಿಸಿ ರಚಿಸಿದ ವಿಜಯನಗರ ಜಿಲ್ಲೆ ಬದಲಿಗೆ ಕೊಪ್ಪಳ ಜಿಲ್ಲೆ ಉಸ್ತುವಾರಿಯಾಗಿ ನೇಮಕ ಮಾಡಿರುವ ಮುಖ್ಯಮಂತ್ರಿ ಬೊಮ್ಮಾಯಿ ಹಾಗು ಬಿಜೆಪಿ ಹೈಕಮಾಂಡ್ ನಿರ್ಧಾರದಿಂದ ಆನಂದ್ ಸಿಂಗ್ ಅಸಮಾಧಾನಗೊಂಡಿದ್ದರು. ಈ ಹಿಂದೆ ಪ್ರವಾಸೋದ್ಯಮ ಖಾತೆ ಬಗ್ಗೆ ಕೂಡ ಅಸಮಾಧಾನ ಹೊರ ಹಾಕಿದ್ದರು. ಬಿಜೆಪಿಯಲ್ಲಿ ಅಸಮಾಧಾನದೊಂದಿಗೆ ದಿನದೂಡುತ್ತಿರುವ ಆನಂದ್ ಸಿಂಗ್ ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರುವುದು ನಿಶ್ಚಿತ ಎನ್ನುವ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಬೆಜೆಪಿಯಲ್ಲಿದ್ದ ಆನಂದ್ ಸಿಂಗ್ ನಂತರ ಸಿದ್ದರಾಮಯ್ಯ ಕಾಲದಲ್ಲಿ ಕಾಂಗ್ರೆಸ್ ಸೇರಿದ್ದರು. ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಸಚಿವರೂ ಆಗಿದ್ದರು. ನಂತರ ಆಪರೇಷನ್ ಕಮಲ ಸಂದರ್ಭ ಮೊದಲನೆಯವರಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತ್ಯಜಿಸಿದ್ದರು.












































