Political

ಏನಿದು ಬಿಜೆಪಿಯ ಆಪರೇಷನ್ ಕಮಲ? ಏಕನಾಥ್ ಶಿಂಧೆಯ ಬಂಡಾಯದ ನಂತರ ಮಹಾರಾಷ್ಟ್ರದಲ್ಲಾದ ಬದಲಾವಣೆಗಳು ಯಾವುವು?

ಮುಂಬಯಿ: ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಮತ್ತು ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರು ಮಂಗಳವಾರ ತಮ್ಮ ಪಕ್ಷದ ವಿರುದ್ಧ ಬಂಡಾಯವೆದ್ದು ಕನಿಷ್ಠ 21 ಸೇನಾ ಶಾಸಕರೊಂದಿಗೆ ಸೂರತ್‌ನ ಲೆ ಮೆರಿಡಿಯನ್ ಹೋಟೆಲ್‌ಗೆ ಬಂದಿಳಿದ ಕಾರಣ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದೆ. ಎರಡೂವರೆ ವರ್ಷಗಳ ಹಿಂದಿನ ಸರ್ಕಾರದ ಸ್ಥಿರತೆಯು ಸೋಮವಾರ ರಾತ್ರಿ ನಡೆದ ರಾಜ್ಯ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯ ಫಲಿತಾಂಶದ ಕೆಲವೇ ಗಂಟೆಗಳಲ್ಲಿ ನಾಟಕೀಯ ತಿರುವು ಪಡೆದುಕೊಂಡಿದೆ.

ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ತಾನು ಸ್ಪರ್ಧಿಸಿದ 6 ಸ್ಥಾನಗಳಲ್ಲಿ ಒಂದನ್ನು ಕಳೆದುಕೊಂಡಿದ್ದು, ಪ್ರತಿಪಕ್ಷ ಬಿಜೆಪಿ ತಾನು ಸ್ಫರ್ಧಿಸಿದ್ದ 5 ಅಭ್ಯರ್ಥಿಗಳನ್ನೂ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವೀಯಾಯಿತು. ಬಿಜೆಪಿಯಿಂದ ಮೇಲ್ಮನೆಗೆ ಚುನಾಯಿತರಾದ ಐದು ಸದಸ್ಯರು ಬಿಜೆಪಿ ಹೊರತು ಪಡಿಸಿ ಕಾಂಗ್ರೆಸ್, ಶಿವಸೇನಾ ಸೇರಿ ಆಡಳಿತ ಪಕ್ಷಗಳ ಶಾಸಕರ ಬೆಂಬಲವನ್ನೂ ಪಡೆದುಕೊಂಡಿರುವುದು ಸ್ಪಷ್ಟವಾಗಿತ್ತು. ಈ ಮಧ್ಯೆ ಸರ್ಕಾರವನ್ನು ಬೀಳಿಸಲು ಬಿಜೆಪಿ ಆಪರೇಷನ್ ಕಮಲವನ್ನು ಪ್ರಾರಂಭಿಸಿದೆ ಎಂದು ಆಡಳಿತ ಪಕ್ಷಗಳು ಆರೋಪಿಸಿವೆ.

288 ಸದಸ್ಯರ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಶಿವಸೇನೆ 55 ಶಾಸಕರು, ಎನ್‌ಸಿಪಿ (53), ಕಾಂಗ್ರೆಸ್ (44), ಬಹುಜನ ವಿಕಾಸ್ ಅಗಾದಿ (ಮೂರು), ಸಮಾಜವಾದಿ ಪಕ್ಷ, ಎಐಎಂಐಎಂ ಮತ್ತು ಪ್ರಹಾರ್ ಜನಶಕ್ತಿ ಪಕ್ಷ ತಲಾ ಎರಡು ಶಾಸಕರನ್ನು ಹೊಂದಿದೆ. ಎಂಎನ್ಎಸ್, ಸಿಪಿಐ, ಪಿಡಬ್ಲ್ಯೂಪಿ, ಸ್ವಾಭಿಮಾನಿ ಪಕ್ಷ, ರಾಷ್ಟ್ರೀಯ ಸಮಾಜ ಪಕ್ಷ, ಜನಸುರಾಜ್ಯ ಶಕ್ತಿ ಪಕ್ಷ ಮತ್ತು ಕ್ರಾಂತಿಕಾರಿ ಶೆಟ್ಕರಿ ಪಕ್ಷ ತಲಾ ಒಬ್ಬ ಶಾಸಕರನ್ನು ಹೊಂದಿದೆ. 13 ಮಂದಿ ಸ್ವತಂತ್ರ ಶಾಸಕರಿದ್ದಾರೆ. ಪ್ರತಿಪಕ್ಷ ಬಿಜೆಪಿ 106 ಶಾಸಕರನ್ನು ಹೊಂದಿದೆ.

ಇದೀಗ ಶಿಂಧೆ ಅವರು ತನ್ನ ಬಳಿ ೨೪ಕ್ಕೂ ಹೆಚ್ಚು ಶಾಸಕರಿದ್ದಾರೆ ಎಂದು ಹೇಳಿರುವುದರಿಂದ ಶಿವಸೇನಾ ಬಲ ತಗ್ಗಲಿದೆ. ಆಗ ಸರ್ಕಾರ ರಚಿಸಲು ಬೇಕಾದ 144 ಸ್ಥಾನಗಳ ಹತ್ತಿರ ಬಂದು ನಿಲ್ಲಲಿದೆ. ಮತ್ತಷ್ಟು ಶಾಸಕರು ಹೊರ ನಡೆದರೆ ಸರಕಾರ ಬೀಳುವ ಅಪಾಯವೂ ಕೂಡ ಇರಲಿದೆ. ಇಂದು ಶಿವಸೇನೆ ಕರೆದ ಶಾಸಕರ ಸಭೆಗೆ ಕೇವಲ 18 ಮಂದಿ ಹಾಜರಾಗಿರುವುದು ಸರಕಾರ ಪತನದ ಮುನ್ಸೂಚನೆ ನೀಡಿದೆ.

ಈ ಮಧ್ಯೆ ಶಿಂಧೆ ತಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಅಲ್ಲ ಎಂದಿದ್ದು ಶಿವಸೇನೆ ಕೂಡಲೇ ಮಹಾಘಟ್ ಬಂಧನ್ ಸರ್ಕಾರದಿಂದ ಹೊರಬಂದು ಬಿಜೆಪಿ ಜತೆ ಸೇರಿ ಸರಕಾರ ರಚಿಸಬೇಕೆಂದು ತನ್ನ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಬಿಜೆಪಿ ಆಡಳಿತವಿರುವ ಗುಜರಾತಿನಲ್ಲಿ ಬಂಡಾಯ ಶಾಸಕರು ಉಳಿದಿದ್ದು ಅಲ್ಲಿನ ಸರ್ಕಾರ ಹೋಟೆಲ್ ಸುತ್ತಾ ಭದ್ರತೆ ಹೆಚ್ಚಿಸಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version