
ಚಂಡೀಗಢ: ಪ್ರಾಮಾಣಿಕ ವ್ಯಕ್ತಿಯನ್ನು ದೀರ್ಘಕಾಲ ತಡೆಯಲು ಸಾಧ್ಯವಿಲ್ಲ ಎನ್ನುವ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮಗಳು ತನ್ನ ತಂದೆಯ ಪರ ಬ್ಯಾಟ್ ಬೀಸಿದ್ದಾರೆ. ಪ್ರಾಮಾಣಿಕ ಮತ್ತು ಭ್ರಷ್ಟರ ನಡುವೆ ಹೋಲಿಕೆ ಸರಿಯಲ್ಲ ಎಂದು ಪರೋಕ್ಷವಾಗಿ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ವಿರುದ್ಧ ಸಿಧು ಪುತ್ರಿ ಕುಟುಕಿದ್ದಾರೆ.
ಕಾಂಗ್ರೆಸ್ ಪಕ್ಷ ಸಿಧು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದೆ ಹಾಲಿ ಮುಖ್ಯಮಂತ್ರಿ ಚನ್ನಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿತ್ತು. ಇದರಿಂದಾಗಿ ಸಿಧು ಅಸಮಾಧಾನಿತರಾಗಿದ್ದರು. ಈಗ ಸಿಧು ಪುತ್ರಿಯ ಹೇಳಿಕೆ ಪಂಜಾಬ್ ಕಾಂಗ್ರೆಸ್ ನಲ್ಲಿ ಬಂಡಾಯದ ಒಳ ಏಟು ಬೀಳುವ ಸಾಧ್ಯತೆಯನ್ನು ತೋರಿಸುತ್ತಿದೆ.
ಸಿಧು ಪುತ್ರಿ ರಬಿಯಾ ಕೌರ್, “ಒಬ್ಬ ಮಗಳಾಗಿ ನಾನು ಹೇಳುವುದೇನೆಂದರೆ ನಮ್ಮ ತಂದೆ ಪಂಜಾಬ್ ಚುನಾವಣೆಗೆ ಸಿಎಂ ಅಭ್ಯರ್ಥಿಯಾಗದಿದ್ದರೂ ಪರವಾಗಿಲ್ಲ, ಅವರ ಇಮೇಜ್ ಶುದ್ಧವಾಗಿದೆ. ಮುಂದೊಂದು ದಿನ ಅವರು ಖಂಡಿತವಾಗಿ ದೊಡ್ಡ ಕೆಲಸ ಮಾಡುತ್ತಾರೆ. ಸಿಎಂ ಅಭ್ಯರ್ಥಿ ಆಯ್ಕೆ ಸಂದರ್ಭ ಕಾಂಗ್ರೆಸ್ ಹೈಕಮಾಂಡ್ ಬಲವಂತದ ಹಾಗು ಅವಸರದ ನಿರ್ಧಾರ ತೆಗೆದುಕೊಂಡಿರಬಹುದು. ನಾನು ಆ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ” ಎಂದು ಹೇಳಿದ್ದಾರೆ.












































