
ಬೆಂಗಳೂರು: ರಾಜ್ಯ ಚುನಾವಣೆಗೆ ಇನ್ನು 8 ತಿಂಗಳು ಬಾಕಿ ಉಳಿದಿರುವಂತೆಯೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ತಯಾರಿಯಲ್ಲಿ ಮುಂದಿದ್ದು ಆಡಳಿತಾರೂಢ ಬಿಜೆಪಿ ಹಾಗು ಜೆಡಿಎಸ್ ಚುನಾವಣಾ ತಯಾರಿಯಲ್ಲಿ ಇನ್ನೂ ಕುಂಟುತ್ತಲೇ ಇದೆ. ಮೊದಲೇ ಚುನಾವಣೆಗೆ ಪಕ್ಕಾ ಸಿದ್ಧತೆ ನಡೆಸಿ ಎಲ್ಲ ಪಕ್ಷಗಳಿಗಿಂತ ಮುಂದಿದ್ದ ರಾಜ್ಯ ಕಾಂಗ್ರೆಸ್ ಇಂದಿನ ಸಿದ್ದರಾಮೋತ್ಸವದ ಬಳಿಕ 4 ಹೆಜ್ಜೆ ಮತ್ತಷ್ಟು ಮುಂದೆ ಹೋಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಅಭಿಮಾನಿಗಳು ಮಾಡುತ್ತಿರುವ ಸಮಾರಂಭ ಅಷ್ಟೇ ಎಂದು ಶುರುವಾದ ಸಿದ್ದರಾಮೋತ್ಸವ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಯಿತು. ಒಬ್ಬ ನಾಯಕನ ಜನ್ಮ ದಿನ ಆಚರಣೆಗೆ ಇಷ್ಟೊಂದು ಲಕ್ಷಗಳಲ್ಲಿ ಜನ ಸೇರಿರುವುದು ಇದೇ ಮೊದಲು. ಡಿಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ಅವರ ನಡುವೆ ಮುಂದಿನ ಸಿಎಂ ಸ್ಥಾನಕ್ಕಾಗಿ ನಡೆದಿದ್ದ ಸಮರಕ್ಕೆ ಇಂದಿನ ಸಿದ್ದರಾಮೋತ್ಸವ ತಾರ್ಕಿಕ ಅಂತ್ಯ ನೀಡಿದೆ. ರಾಹುಲ್ ಗಾಂಧೀ ಸಮ್ಮುಖದಲ್ಲಿ ಡಿಕೆಶಿ ಸಿದ್ಧರಾಮಯ್ಯ ಅವರ ಮುಂದಾಳತ್ವದಲ್ಲಿ ಸಾಮೂಹಿತ ನಾಯಕತ್ವದಡಿ ಮುಂದಿನ ಚುನಾವಣೆ ಎದುರಿಸುತ್ತೇವೆ ಅನ್ನುವ ಮಾತಿನ ಹಿಂದಿನ ಅರ್ಥ ಅದಾಗಲೇ ಗೊತ್ತಾಗಿಬಿಟ್ಟಿದೆ. ರಾಹುಲ್ ಗಾಂಧಿ ಕೂಡ ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಡಲು ತಿಳಿಸಿದ್ದು ಡಿಕೆಶಿ ನಿಧಾನವಾಗಿ ಮುಂದಿನ ಸಿಎಂ ರೇಸಿನಿಂದ ಹಿಂದೆ ಸರಿಯುವ ಸೂಚನೆ ನೀಡಿದಂತಿತ್ತು. ಇಷ್ಟು ವರ್ಷ ಕಾದಿದ್ದೀನಿ , ಇನ್ನೈದು ವರ್ಷ ಕಾಯೋಣ ಅನ್ನುವ ಯೋಚನೆಗೆ ಡಿಕೆಶಿ ಬಂದಿದ್ದರೆ ಯಾವುದೇ ಆಶ್ಚರ್ಯವಿಲ್ಲ.
ಅಂತೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೆ ಆದಲ್ಲಿ ಸಿದ್ದರಾಮಯ್ಯ ಅವರನ್ನೇ ಸಿಎಂ ಕುರ್ಚಿಯ ಮೇಲೆ ಕೂರಿಸಲು ಹೈಕಮಾಂಡ್ ನಿರ್ಧರಿಸಿದೆ. ರಾಜ್ಯದಲ್ಲಿ ಮತ್ತೆ ಚುನಾವಎಂ ಗೆಲ್ಲುವ ತಾಕತ್ತು ಇರುವುದು ಸಿದ್ದು ಅವರಿಗೆ ಎಂದು ಹೈಕಮಾಂಡಿಗೂ ಮನವರಿಕೆಯಾಗಿದೆ.
ಕಾಂಗ್ರೆಸ್ಸಿನಲ್ಲಿ ಒಂಥರಾ ಸಂಭ್ರಮದ ವಾತಾವರಣವಿದ್ದರೆ ಬಿಜೆಪಿ ಜೆಡಿಎಸ್ ಇನ್ನೂ ಗೊಂದಲದಲ್ಲಿಯೇ ಮುಳುಗಿದೆ. ಬಿಜೆಪಿಯ ರಾಷ್ಟ್ರೀಯ ನಾಯಕತ್ವ ಬಲಿಷ್ಠವಾಗಿದ್ದರೆ ರಾಜ್ಯ ನಾಯಕತ್ವ ಬಲ ಕಳೆದುಕೊಂಡಿದೆ. ಕಾಂಗ್ರೆಸ್ನಲ್ಲಿ ಇದರ ವಿರುದ್ಧ ಸ್ಥಿತಿ ಇದೆ. ಅಲ್ಲಿ ರಾಷ್ಟ್ರೀಯ ನಾಯಕತ್ವ ದುರ್ಬಲವಾಗಿದ್ದರೆ ರಾಜ್ಯ ಕಾಂಗ್ರೆಸ್ ನಾಯಕತ್ವ ಬಲಿಷ್ಠವಾಗಿದೆ. ಬಹುಶ ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಒಂದು ಬಲಿಷ್ಠ ನಾಯಕತ್ವ ಇರುವ ರಾಜ್ಯ ಇದೆ ಎಂದಾದರೆ ಅದು ಕರ್ನಾಟಕ ಮಾತ್ರ. ಬಿಜೆಪಿಯಲ್ಲಿ ಹಾಗಿಲ್ಲ. ಯಡಿಯೂರಪ್ಪನವರನ್ನು ತೆರೆಗೆ ಸರಿಸುವ ಯತ್ನಗಳಾದ ಮೇಲೆ ಇಲ್ಲಿನ ನಾಯಕತ್ವ ದುರ್ಬಲವಾಗಿದೆ. ಹಾಗಾಗಿ ಮುಂದಿನ ರಾಜ್ಯ ಚುನಾವಣೆಯಲ್ಲಿ ಮೋದಿ ಹೆಸರೊಂದನ್ನೇ ನೆಚ್ಚಿಕೊಂಡು ರಣರಂಗಕ್ಕೆ ಇಳಿಯಬೇಕಾದ ಸ್ಥಿತಿ ಬಿಜೆಪಿಯದ್ದು. ರಾಜ್ಯದಲ್ಲಿ ಕಂಡು ಬರುತ್ತಿರುವ ಆಡಳಿತ ವಿರೋಧಿ ಅಲೆ, ರಾಜ್ಯ ಬಿಜೆಪಿ ನಾಯಕತ್ವದ ಬಗ್ಗೆ ಕಾರ್ಯಕರ್ತರಲ್ಲಿ ಇರುವ ಅಸಮಾಧಾನ, ಹೇಳಿಕೊಳ್ಳುವ ಬಲಿಷ್ಠ ನಾಯಕ ಯಾರೂ ಇರದಿರುವುದು ಹೀಗೆ ಹಲವು ಸಮಸ್ಯೆಗಳ ಸುಳಿಯಲ್ಲಿ ಬಿಜೆಪಿ ಇದೆ. ಇಂತಹ ಪರಿಸ್ಥಿತಿಯಲ್ಲಿ 150 ಸ್ಥಾನ ಗೆಲ್ಲುವ ಗುರಿ ಹೊಂದಿರುವ ಬಿಜೆಪಿ 80-90 ಸ್ಥಾನ ಗೆದ್ದರೆ ಹೆಚ್ಚು.
ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಕಾಂಗ್ರೆಸ್ ಗೆ ದೊಡ್ಡ ಬೂಸ್ಟ್ ನೀಡಿದ್ದು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮತಗಳು ಕಾಂಗ್ರೆಸ್ಸಿನತ್ತ ವಾಲುತ್ತಿವೆ. ಉತ್ತರ ಕರ್ನಾಟಕ ಕೂಡ ಯಡಿಯೂರಪ್ಪ ಅವರ ಚುನಾವಣಾ ರಾಜಕೀಯ ನಿರ್ಗಮನದ ಬಳಿಕ ಹರಿದು ಹಂಚಿ ಹೋಗುವ ಸಾಧ್ಯತೆ ಇದೆ. ಇದೇ ವೇಗದಲ್ಲಿ ಕಾಂಗ್ರೆಸ್ ಚುನಾವಣಾ ಸಿದ್ಧತೆಗಳನ್ನು ಮಾಡುತ್ತಾ ಹೋದರೆ ಇನ್ನು 8 ತಿಂಗಳಲ್ಲಿ ಬರುವ ಚುನಾವಣೆಯಲ್ಲಿ ಮ್ಯಾಜಿಕ್ ಸಂಖ್ಯೆಯನ್ನು ತಲುಪುವುದು ಕಷ್ಟವಾಗಲಾರದು. ಆದರೆ ರಾಜ್ಯ ನಾಯಕತ್ವ ದುರ್ಬಲವಾದರೂ ಬಿಜೆಪಿ ಕೇಂದ್ರ ನಾಯಕತ್ವ ಬಲಿಷ್ಠವಾಗಿದೆಯಲ್ಲ. ಅವರು ಬಿಡಬೇಕಲ್ಲ. ಚುನಾವಣಾ ಕಣ ತುಂಬಾ ಮಜವಾಗಿರಲಿದೆ. ಕಾದು ನೋಡೋಣ.












































