
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಹಾಗು ಇತರ ವಿಷಯಗಳ ಚರ್ಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಲು ಸಿದ್ಧವಾಗಿರುವ ದಿನಗಳ ಮೊದಲೇ ಸಚಿವ ಶ್ರೀರಾಮುಲು ಅವರು ದೆಹಲಿಗೆ ದೌಡಾಯಿಸಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಹಿಂದೆ ವಿಧಾನಸಭಾ ಚುನಾವಣೆ ಸಂದರ್ಭ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದ ಬಿಜೆಪಿ ಹೈಕಮಾಂಡ್ ನಂತರ ಅಧಿಕಾರಕ್ಕೆ ಏರಿದ ಬಳಿಕ ಆ ಪ್ರಸ್ತಾವನೆಯನ್ನು ಕೈ ಬಿಟ್ಟಿತ್ತು. ಇದರಿಂದ ಶ್ರೀರಾಮುಲು ಅವರು ನೊಂದುಕೊಂಡಿದ್ದರು. ಜತೆಗೆ ತಮಗೆ ಇಷ್ಟವಾದ ಸಚಿವ ಸ್ಥಾನ ನೀಡಿಲ್ಲ ಅನ್ನುವ ಬಗ್ಗೆಯೂ ಅಸಮಾಧಾನಗೊಂಡಿದ್ದರು. ಮೊದಲ ಅವಧಿಯ ಬಿಜೆಪಿ ಸರಕಾರದ ಅವಧಿಯಲ್ಲಿ ಪ್ರಮುಖ ನಾಯಕರಾಗಿ ಬಿಂಬಿತರಾಗಿದ್ದ ಶ್ರೀರಾಮುಲು ಎರಡನೆಯ ಅವಧಿಯ ಬಿಜೆಪಿ ಆಡಳಿತದಲ್ಲಿ ಮೂಲೆಗುಂಪಾದಂತೆ ಕಾಣುತ್ತಿದ್ದರು. ರಾಜ್ಯದ ೫ಕ್ಕೂ ಜಿಲ್ಲೆಗಳಲ್ಲಿ ರಾಜಕೀಯವಾಗಿ ಪ್ರಭಾವ ಹೊಂದಿರುವ ಶ್ರೀರಾಮುಲು ಅವರನ್ನು ಯಾಕೆ ಇತ್ತೀಚಿಗೆ ಕಡೆಗಣಿಸಲಾಗಿತ್ತು ಅನ್ನುವುದನ್ನ ದೆಹಲಿಯಲ್ಲಿ ಕೂತಿರುವ ಪಕ್ಷದ ಸಂಘಟಕರೇ ಉತ್ತರಿಸಬೇಕು.
ಶ್ರೀರಾಮುಲು ದೆಹಲಿ ಭೇಟಿಯ ಹಿಂದೆ ರಾಮುಲು ಸ್ನೇಹಿತ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಮತ್ತೆ ಸಕ್ರಿಯ ರಾಜಕಾರಣಕ್ಕೆ ಕರೆತರುವ ಪ್ರಯತ್ನವೂ ಇದೆ ಎನ್ನಲಾಗಿದೆ. ಸ್ವತಃ ಜನಾರ್ಧನ ರೆಡ್ಡಿ ಅವರು ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದ್ದಾರೆ ಎಂದು ತಿಳಿದುಬಂದಿದೆ. ಶ್ರೀರಾಮುಲು ಹಾಗು ಜನಾರ್ಧನ ರೆಡ್ಡಿ ಸೇರಿ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಿ ಮುಂದಿನ ಚುನಾವಣೆಗೆ ಬಿಜೆಪಿಗೆ ಜಯಭೇರಿ ತರುವ ಯೋಜನೆ ಹೊಂದಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಜನಾರ್ಧನ ರೆಡ್ಡಿಯವರನ್ನು ಮತ್ತೆ ಸಕ್ರಿಯ ರಾಜಕಾರಣಕ್ಕೆ ಬರಲು ಅನುವು ಮಾಡಿಕೊಡುವಂತೆ ದೆಹಲಿ ನಾಯಕರಿಗೆ ಮನವರಿಕೆ ಮಾಡಿಕೊಡಲು ಶ್ರೀರಾಮುಲು ಅವರು ಹೋಗಿದ್ದಾರೆ ಎನ್ನಲಾಗಿದೆ.












































