Political

ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿಯಾಗಿ ನಿರ್ಮಲಾ ಸೀತಾರಾಮನ್? ಏನಿದೆ ಹೈಕಮಾಂಡ್ ಮನದಲ್ಲಿ

ನವದೆಹಲಿ/ಮಂಗಳೂರು: 2024ರ ಲೋಕಸಭಾ ಚುನಾವಣೆಗೆ ಇನ್ನು ಒಂದೆರಡು ತಿಂಗಳು ಬಾಕಿ ಇರುವಂತೆಯೇ ಆಯಾ ಕ್ಷೇತ್ರಗಳಲ್ಲಿ ರಾಜಕೀಯ ಮೇಲಾಟ ಗರಿಗೆದರಿದ್ದು ಆಯಾ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ತಮ್ಮದೇ ರೀತಿಯಲ್ಲಿ ಪ್ರಯತ್ನವನ್ನು ಆರಂಭಿಸಿದ್ದಾರೆ. ಹಲವು ಕ್ಷೇತ್ರಗಳು ಅಭ್ಯರ್ಥಿಗಳ ವಿಚಾರದಲ್ಲಿ ಕುತೂಹಲ ಮೂಡಿಸಿದ್ದು ಅಂತಹ ಕ್ಷೇತ್ರಗಳಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರ ಕೂಡ ಒಂದು.

3 ಬಾರಿ ಬಿಜೆಪಿಯಿಂದ ಆಯ್ಕೆಯಾಗಿರುವ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಮೇಲೆ ಕ್ಷೇತ್ರದಾದ್ಯಂತ ವ್ಯಕ್ತಿ ವಿರೋಧಿ ಅಲೆ ಇರುವುದು, ಟಿಕೆಟ್ ಗಾಗಿ ಹಿರಿಯ ನಾಯಕರಾದ ಅರುಣ್ ಕುಮಾರ್ ಪುತ್ತಿಲ, ಸತ್ಯಜಿತ್ ಸುರತ್ಕಲ್ ಪ್ರಯತ್ನ ನಡೆಸುತ್ತಿರುವುದು ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ ಬೃಜೇಶ್ ಚೌಟ ಕಳೆದೆರಡು ವರ್ಷಗಳಿಂದ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಸಂಪರ್ಕ ಹೊಂದುವ ಪ್ರಯತ್ನ ಮಾಡುತ್ತಾ ಟಿಕೆಟ್ ಪಡೆಯುವ ಆಶಾವಾದ ಹೊಂದಿರುವುದು ದಕ್ಷಿಣ ಕನ್ನಡ ಕ್ಷೇತ್ರವನ್ನು ಕುತೂಹಲದ ದಡಕ್ಕೆ ತಂದು ನಿಲ್ಲಿಸಿದೆ.

ಇನ್ನು ಹಾಲಿ ಸಂಸದ, ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬಗೆಗೆ ಕ್ಷೇತ್ರದ ಜನರಲ್ಲಿ ಮನೆ ಮಾಡಿದ್ದ ವಿರೋಧಿ ಅಲೆ ಕಳೆದ ಒಂದು ವರ್ಷಗಳ ಅವಧಿಯಲ್ಲಿ ಮತ್ತಷ್ಟು ಹೆಚ್ಚಾಗಿದ್ದು ಬಿಜೆಪಿ ಕಾರ್ಯಕರ್ತರು ಹಾಗು ಬಿಜೆಪಿಯ ಪಾರಂಪರಿಕ ಮತದಾರರು ಅಭ್ಯರ್ಥಿ ಬದಲಾವಣೆಯತ್ತ ಒಲವು ವ್ಯಕ್ತಪಡಿಸುತ್ತಿರುವುದು ಇದೀಗ ಜಗಜ್ಜಾಹೀರಾದ ಸಂಗತಿ. ಹೀಗಿರುವಾಗ ಬಿಜೆಪಿ ಕೇಂದ್ರ ಹೈಕಮಾಂಡ್ ಕೆಲವು ಅಚ್ಚರಿಯ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳ ಬಗ್ಗೆ ಕಳೆದ ಕೆಲವು ದಿನಗಳಿಂದ ಗುಸು ಗುಸು ಕೇಳಿ ಬರುತ್ತಿದೆ.

ರಾಜ್ಯ ಸಭೆಯ ಸದಸ್ಯರಾಗಿ ಕೇಂದ್ರ ಸಚಿವರಾಗಿರುವ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹಾಗು ವಿದೇಶಾಂಗ ವ್ಯವಹಾರಗಳ ಸಚಿವ ಜೈ ಶಂಕರ್ ಅವರನ್ನು ಈ ಬಾರಿ ಲೋಕಸಭಾ ಸ್ಪರ್ಧೆಗೆ ಇಳಿಸಲು ಬಿಜೆಪಿ ಚಿಂತಿಸಿದೆ. ಅದರಲ್ಲೂ ಇವರಿಬ್ಬರನ್ನೂ ಕರ್ನಾಟಕದಿಂದಲೇ ಕಣ್ಣಕ್ಕಿಳಿಸುವ ಸಾಧ್ಯತೆ ಹೆಚ್ಚಿದ್ದು ಬೆಂಗಳೂರು ದಕ್ಷಿಣ, ಉತ್ತರ ಕನ್ನಡ ಹಾಗು ದಕ್ಷಿಣ ಕನ್ನಡ ಕ್ಷೇತ್ರಗಳಲ್ಲಿ ಯಾವುದಾದರೂ ಎರಡರಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಜೈ ಶಂಕರ್ ಅವರನ್ನು ಈ ಹಿಂದೆ ಬಿಜೆಪಿ ನಾಯಕ ದಿವಂಗತ ಅನಂತ್ ಕುಮಾರ್ ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣದಿಂದ (ಹಾಲಿ ಸಂಸದ ತೇಜಸ್ವೀ ಸೂರ್ಯ) ಸ್ಪರ್ಧೆಗೆ ಇಳಿಸಿದರೆ ನಿರ್ಮಲ ಸೀತಾರಾಮನ್ ಅವರಿಗೆ ದಕ್ಷಿಣ ಕನ್ನಡ ಅಥವಾ ಉತ್ತರ ಕನ್ನಡ (ಎರಡೂ ಕ್ಷೇತ್ರಗಳಲ್ಲಿ ಹಾಲಿ ಸಂಸದರ ಬಗ್ಗೆ ವಿರೋಧಿ ಅಲೆ ಇದೆ) ಕ್ಷೇತ್ರದಲ್ಲಿ ಒಂದರಲ್ಲಿ ಟಿಕೆಟ್ ನೀಡಬಹುದು. ಅದರಲ್ಲೂ ದಕ್ಷಿಣ ಕನ್ನಡ ಬಿಜೆಪಿ ನಾಯಕರ ಜತೆ ನಿರ್ಮಲ ಅವರಿಗೆ ಹೆಚ್ಚಿನ ಸಂಪರ್ಕ ಇದ್ದು ಹಲವು ಬಾರಿ ಜಿಲ್ಲೆಗೆ ಭೇಟಿ ಕೂಡ ನೀಡಿದ್ದಾರೆ. ಹಾಗಾಗಿ ಟಿಕೆಟ್ ಗೊಂದಲಗಳನ್ನು ನಿವಾರಿಸಲು ನಿರ್ಮಲ ಸೀತಾರಾಮನ್ ಅವರನ್ನು ಜಿಲ್ಲೆಗೆ ಕರೆದುಕೊಂಡು ಬಂದು ಭಿನ್ನಮತ ಶಮನಗೊಳಿಸುವ ಹಾಗು ಕರ್ನಾಟಕದಲ್ಲಿ ಈ ಮೂಲಕ ಮತಬ್ಯಾಂಕ್ ಹೆಚ್ಚಿಸಿಕೊಳ್ಳುವ ಯೋಚನೆಯಲ್ಲಿ ಬಿಜೆಪಿ ಹೈಕಮಾಂಡ್ ಇದೆ ಎನ್ನಲಾಗಿದೆ.

ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/CMUDdTXoFVn7atm3zHYGrd

Exit mobile version