
ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಶುರುವಾಗಿದ್ದು ವೇಟ್ ಲಿಫ್ಟರ್ ಸಂಕೇತ್ ಸರ್ಗರ್ ಬೆಳ್ಳಿ ಪದಕ ಗೆದ್ದರೆ, ಕನ್ನಡಿಗ ಕರಾವಳಿಯ ಗುರುರಾಜ್ ಪೂಜಾರಿ ಕಂಚಿನ ಪದಕ ಗೆದ್ದಿದ್ದಾರೆ.
55 ಕೆಜಿ ವಿಭಾಗದ ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ 248 ಕೆಜಿ ಭಾರ ಎತ್ತುವ ಮೂಲಕ 21 ವರ್ಷದ ಸಂಕೇತ್ ಬೆಳ್ಳಿ ಪದಕ ಬೀಗಿದರು. ಮೊದಲ ಸ್ಥಾನದಲ್ಲಿದ್ದ ಸಂಕೇತ್ ಗಾಯಗೊಂಡ ಕಾರಣ ಎರಡನೇ ಸುತ್ತಿನಲ್ಲಿ ಹೆಚ್ಚು ಭಾರ ಎತ್ತಲು ಸಾಧ್ಯವಾಗದೆ ಚಿನ್ನದ ಪದಕ ಕೈತಪ್ಪುವಂತಾಯಿತು.
ಕಾಮನ್ವೆಲ್ತ್ ಗೇಮ್ಸ್ ನ 61 ಕೆಜಿ ವಿಭಾಗದ ವೇಯ್ಟ್ ಲಿಫ್ಟಿಂಗ್ ನಲ್ಲಿ ಕನ್ನಡಿಗ ಗುರುರಾಜ ಪೂಜಾರಿ ಕಂಚಿನ ಪದಕ ಗೆದ್ದಿದ್ದಾರೆ. ಪುರುಷರ 61 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಮೂಲಕ ಮತ್ತೊಮ್ಮೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಗುರುರಾಜ್ ಪೂಜಾರಿ ಈ ಮೊದಲು 2018ರಲ್ಲಿ ನಡೆದ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಆರಂಭಿಕ ಪದಕ ತಂದುಕೊಟ್ಟ ಈ ಇಬ್ಬರಿಗೂ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಟ್ವಿಟ್ಟರಿನಲ್ಲಿ ಇಬ್ಬರ ಫೋಟೋ ಹಾಕಿ ಶುಭ ಹಾರೈಸಿದ್ದಾರೆ.