Sports

ಇಂಗ್ಲೆಂಡ್‌ ಟೆಸ್ಟ್‌ ಸರಣಿಯ ಮೊದಲ 2 ಪಂದ್ಯಗಳಿಗೆ ಭಾರತ ತಂಡ ಪ್ರಕಟ!

ಬೆಂಗಳೂರು: ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಅಶಿಸ್ತಿನ ವರ್ತನೆ ತೋರಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ವಿಕೆಟ್‌ಕೀಪರ್‌ ಇಶಾನ್‌ ಕಿಶನ್‌ ಅವರನ್ನು ಕೈಬಿಟ್ಟಿರುವ ಟೀಮ್ ಇಂಡಿಯಾ ಆಯ್ಕೆ ಸಮಿತಿ ಅವರ ಜಾಗದಲ್ಲಿ ಮತ್ತೊಬ್ಬ ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಧ್ರುವ್‌ ಜುರೆಲ್‌ ಅವರನ್ನು ಆಯ್ಕೆ ಮಾಡಿದೆ.

ಧ್ರುವ್‌ ಜುರೆಲ್‌ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಈವರೆಗೆ 15 ಪಂದ್ಯಗಳನ್ನು ಮಾತ್ರ ಆಡಿದ್ದು ಇದೇ ಮೊದಲ ಬಾರಿ ಭಾರತೀಯ ತಂಡದ ಬಾಗಿಲು ತೆರೆದಿದೆ. ಧ್ರುವ್ ಜುರೆಲ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 259 ರನ್‌ಗಳ ವೈಯಕ್ತಿಕ ಸ್ಕೋರ್‌ ಮಾಡಿದ ದಾಖಲೆ ಹೊಂದಿದ್ದಾರೆ. ಇದೇ ಕಾರಣಕ್ಕೆ ಟೀಮ್ ಇಂಡಿಯಾ ಆಯ್ಕೆ ಸಮಿತಿ ಯುವ ಪ್ರತಿಭೆಗೆ ಮಣೆ ಹಾಕಿದೆ.

ಇಶಾನ್ ಕಿಶನ್ ಔಟ್: ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೂ ಮುನ್ನ ಆಯಾಸವಾಗಿದೆ, ಕುಟುಂಬ ಸದಸ್ಯರೊಂದಿಗೆ ವಿಶ್ರಾಂತಿ ಪಡೆಯುವುದಾಗಿ ಹೇಳಿ ದುಬೈನಲ್ಲಿ ಪಾರ್ಟಿಗೆ ಹೋಗಿದ್ದ ಇಶಾನ್ ಕಿಶನ್ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಅಶಿಸ್ತಿನ ಕಾರಣಕ್ಕೆ ಅಫ್ಘಾನಿಸ್ತಾನ ಟಿ20 ಸರಣಿಗೆ ಇಶಾನ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ಮುಂಬರುವ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದಲೂ ಕೈಬಿಡಲಾಗಿದೆ.

ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್‌ಗಳ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಕೀಪರ್), ಕೆಎಸ್ ಭರತ್ (ಕೀಪರ್), ಧ್ರುವ್ ಜುರೆಲ್ (ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ವಿಸಿ), ಅವೇಶ್ ಖಾನ್

Exit mobile version