
ಜೈಪುರ್: ನ್ಯೂಜೀಲ್ಯಾನ್ಡ್ ಹಾಗು ಭಾರತ ತಂಡಗಳ ನಡುವಿನ ಕ್ರಿಕೆಟ್ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮ ನೇತೃತ್ವದ ಭಾರತ ತಂಡ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ಕನ್ನಡಿಗ ರಾಹುಲ್ ದ್ರಾವಿಡ್ ಶುಭಾರಂಭ ಮಾಡಿದಂತಾಗಿದೆ. ಈ ಜಯದಿಂದಾಗಿ ಭಾರತ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ನಡೆಸುವ ನಿರ್ಧಾರ ಕೈಗೊಂಡ ಭಾರತ ಕೀವೀಸ್ ಅನ್ನು 165 ರನ್ನುಗಳಿಗೆ ನಿಯಂತ್ರಿಸಿತು. 20 ಓವರುಗಳ ಚುಟುಕು ಕ್ರಿಕೆಟ್ ನಲ್ಲಿ ಭಾರತದ ಎದುರು ಮೊದಲ ಅರ್ಧ ಶತಕ ಸಿಡಿಸಿದ ಗುಪ್ಟಿಲ್ ಮೂರು ಬೌಂಡರಿ ನಾಲ್ಕು ಸಿಕ್ಸರ್ ನೆರವಿನಿಂದ 70 ರನ್ ಗಳಿಸಿದರು. ಚಾಪ್-ಮ್ಯಾನ್ 63 ರನ್ ಗಳಿಸಿದರು. ಭಾರತದ ಪರ ರವಿಚಂದ್ರನ್ ಅಶ್ವಿನ್ ಹಾಗು ಭುವನೇಶ್ವರ್ ಕುಮಾರ್ ನಿಯಂತ್ರಿತ ರನ್ ನೀಡಿ ತಲಾ 2 ವಿಕೆಟ್ ಗಳಿಸಿದರು.
ಉತ್ತರವಾಗಿ ಬ್ಯಾಟ್ ಬೀಸಿದ ಭಾರತದ ಆರಂಭಿಕ ಜೋಡಿ ಮೊದಲ ವಿಕೇಟಿಗೆ 50 ರನ್ನುಗಳ ಜತೆಯಾಟ ನಡೆಸಿ ಬೇರ್ಪಟ್ಟಿತು. 3ನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್ ಯಾದವ್ ಹಾಗು ರೋಹಿತ್ ಜೋಡಿ ಮತ್ತೆ ಅಬ್ಬರಿಸಲು ಆರಂಭಿಸಿತು. 36 ಬಾಲಿಗೆ 48 ರನ್ ಸಿಡಿಸಿದ ರೋಹಿತ್ ಶರ್ಮ ಕೇವಲ 2 ರನ್ನಿನಿಂದ ತಮ್ಮ 25ನೇ ಅರ್ಧ ಶತಕ ತಪ್ಪಿಸಿಕೊಂಡರು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ 62 ರನ್ ಗಳಿಸಿ ಭಾರತದ ಗೆಲುವನ್ನು ಸುಲಭಗೊಳಿಸಿದರು. 165 ರನ್ನುಗಳ ಗುರಿಯನ್ನು 5 ವಿಕೆಟ್ ನಷ್ಟಕ್ಕೆ 19.4 ಓವರುಗಳಲ್ಲಿ ತಲುಪಿದ ಭಾರತ ತಂಡ ತನ್ನ ನೂತನ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಅದ್ಭುತ ಸ್ವಾಗತ ನೀಡಿತು.












































