
ಲಂಡನ್: ಭಾರತ ಹಾಗು ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೆಯ ಟೆಸ್ಟ್ ಪಂದ್ಯವನ್ನು ಭಾರತ 157 ರನ್ನುಗಳಿಂದ ಗೆದ್ದುಕೊಂಡಿದ್ದು ಸರಣಿಯಲ್ಲಿ 2-1 ಅಂತರದ ಮುನ್ನಡೆ ಸಾಧಿಸಿದೆ. ಸರಣಿಯ ಕೊನೆಯ ಟೆಸ್ಟ್ ಪಂದ್ಯ ಇದೇ ಶುಕ್ರವಾರದಿಂದ ಆರಂಭವಾಗಲಿದೆ.
ಮೂರನೆಯ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಅಂತರದಿಂದ ಸೋತ ಬಳಿಕ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಪೈಪೋಟಿಯುತ ಹೋರಾಟ ನೀಡಿತು. ಮೊದಲ ಇನ್ನಿಂಗ್ಸ್ ನಲ್ಲಿ 191 ರನ್ನುಗಳಿಗೆ ಆಲೌಟ್ ಆದರೂ ಎರಡನೆಯ ಇನ್ನಿಂಗ್ಸ್ ನಲ್ಲಿ 466 ರನ್ ಬಾರಿಸುವ ಮೂಲಕ ಗೆಲುವಿನ ಅಡಿಪಾಯ ಹಾಕಿತು. ರೋಹಿತ್ ಶರ್ಮ ತಾಳ್ಮೆಯ ಶತಕ, ಚೇತೇಶ್ವರ್ ಪೂಜಾರ ಹಾಗು ಶಾರ್ದೂಲ್ ಠಾಕೂರ್ ಮನಮೋಹಕ ಅರ್ಧಶತಕ, ರಿಷಬ್ ಪಂತ್ ಅವರ 50 ರನ್ನುಗಳ ನೆರವಿನಿಂದ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 367 ರನ್ನುಗಳ ಗುರಿ ನೀಡಿತು.
ಗೆಲ್ಲಲು ಮುನ್ನೂರಕ್ಕೂ ಅಧಿಕ ರನ್ನುಗಳ ಗುರಿ ಪಡೆದ ಇಂಗ್ಲೆಂಡ್ ಆರಂಭ ಉತ್ತಮವಾಗಿಯೇ ಇತ್ತು. ಮೊದಲ ವಿಕೇಟಿಗೆ 100 ರನ್ನುಗಳ ಜತೆಯಾಟ ನಡೆಸಿದ ರೋರಿ ಬರ್ನ್ಸ್ ಹಾಗು ಹಸೀಮ್ ಹಮೀದ್ ದೊಡ್ಡ ಮೊತ್ತ ಬಾರಿಸುವ ಸೂಚನೆ ನೀಡಿದ್ದರು. ಆದರೆ ರೋರಿ ಅವರನ್ನು ಔಟ್ ಮಾಡುವ ಮೂಲಕ ಶಾರ್ದೂಲ್ ಠಾಕೂರ್ ಭಾರತಕ್ಕೆ ಮೊದಲ ಬ್ರೇಕ್ ಒದಗಿಸಿದರು. ನಂತರ ಬಂದ ಇಂಗ್ಲೆಂಡ್ ಬ್ಯಾಟ್ಸ್ ಮ್ಯಾನ್’ ಗಳು ಭಾರತೀಯ ಬೌಲರ್ ಗಳನ್ನು ಎದುರಿಸಲಾರದೆ ವಿಕೆಟ್ ಒಪ್ಪಿಸುತ್ತಾ ಸಾಗಿದರು. ಮಧ್ಯಮ ಅವಧಿಯಲ್ಲಿ ಜಸ್ಪ್ರೀತ್ ಬುಮ್ರಾ ಹಾಗು ರವೀಂದ್ರ ಜಡೇಜಾ ಜೋಡಿ ಇಂಗ್ಲೆಂಡಿಗೆ ಮರ್ಮಾಘಾತವನ್ನು ನೀಡುವ ಮೂಲಕ ಪಂದ್ಯ ಭಾರತದ ಕಡೆಗೆ ಸಂಪೂರ್ಣವಾಗಿ ತಿರುಗುವಂತೆ ಮಾಡಿದರು. ನಾಯಕ ಜೋ ರೂಟ್ 36 ರನ್ ಗಳಿಸಿ ಕ್ರೀಸಿಗೆ ಅಂಟಿಕೊಳ್ಳುವ ಪ್ರಯತ್ನ ಪಟ್ಟರೂ ಯಶಸ್ವಿಯಾಗಲಿಲ್ಲ. ಕೊನೆಯಲ್ಲಿ ಇಂಗ್ಲೆಂಡ್ ತಂಡ 210 ರನ್ನುಗಳಿಗೆ ಆಲ್ ಔಟ್ ಆಗುವ ಮೂಲಕ ಭಾರತಕ್ಕೆ ಶರಣಾಯಿತು.
ಭಾರತದ ಪರ ಉಮೇಶ್ ಯಾದವ್ 3 ವಿಕೆಟ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು. ಎರಡನೆಯ ಇನ್ನಿಂಗ್ಸ್ ನಲ್ಲಿ ಅಮೋಘ ಶತಕ ಬಾರಿಸಿ ಭಾರತದ ಗೆಲುವಿಗೆ ಮುನ್ನುಡಿ ಬರೆದ ರೋಹಿತ್ ಶರ್ಮ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.












































