
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಪಿಎಲ್ 2022ರ ಮಹತ್ವದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಆರ್ಸಿಬಿ ತಂಡವನ್ನು ಮೊದಲು ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿದೆ.
ಗುಜರಾತ್ ಟೈಟಾನ್ಸ್ ವಿರುದ್ಧ ಸೋತ ರಾಜಸ್ಥಾನ, ಲಕ್ನೋ ವಿರುಧ್ದ ಗೆದ್ದ ಬೆಂಗಳೂರು ತಂಡದ ವಿರುದ್ಧ ಐಪಿಎಲ್ 2022ರ ಫೈನಲ್ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ. ಆರ್ಸಿಬಿ ತಂಡ ತನ್ನ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಟೇಬಲ್ ಟಾಪರ್ ಗುಜರಾತ್ ಟೈಟಾನ್ಸ್ ವಿರುದ್ಧ ನೀಡಿದ ಸಂಘಟಿತ ಹೋರಾಟ ಹಾಗು ಕ್ವಾಲಿಫೈಯರ್ ೧ರ ಪಂದ್ಯದಲ್ಲಿ ಬಲಿಷ್ಠ ಲಕ್ನೋ ತಂಡವನ್ನು ಹೆಡೆ ಮುರಿ ಕಟ್ಟಿ ಹೊರಗಟ್ಟಿ ತನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದು ಇಂದಿನ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿದೆ.
ಇತ್ತೀಚಿನ ವರದಿ ಬಂದಾಗ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡ ಆರ್ಸಿಬಿ 33 ರನ್ ಗಳಿಸಿದೆ. ಕರ್ನಾಟಕದ ಪ್ರಸಿದ್ಧ್ ಕೃಷ್ಣ ಕೊಹ್ಲಿ ವಿಕೆಟ್ ಪಡೆದು ಬೆಂಗಳೂರಿಗೆ ಮೊದಲ ಆಘಾತ ನೀಡಿದ್ದಾರೆ. ಹಿಂದಿನ ಪಂದ್ಯದ ಹೀರೋ ರಜತ್ ಪಾಟೀದಾರ್ ಹಾಗು ನಾಯಕ ಡುಫ್ಲೆಸಿಸ್ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಆರ್ಸಿಬಿ ಹಾಗು ರಾಜಸ್ಥಾನ ತಂಡಗಳು ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಈ ಹಿಂದಿನ ಪಂದ್ಯದ ತಂಡವೇ ಕಣಕ್ಕಿಳಿದಿದೆ.