
ಮುಂಬಯಿ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಮುಂಬೈ ತಂಡ ಡೆಲ್ಲಿ ತಂಡವನ್ನು ಮಣಿಸಿ ಡೆಲ್ಲಿ ತಂಡದ ಪ್ಲೇ ಆಫ್ ಕನಸನ್ನು ಭಗ್ನಗೊಳಿಸಿತು. ಡೆಲ್ಲಿ ಸೋಲುವುದರೊಂದಿಗೆ ಆರ್ಸಿಬಿ ನಾಲ್ಕನೇ ತಂಡವಾಗಿ ಐಪಿಎಲ್ 2022ರ ಪ್ಲೇ ಆಫ್ ಹಂತ ಪ್ರವೇಶಿಸಿತು. ಮುಂಬೈ ತಂಡ ಡೆಲ್ಲಿಯನ್ನು 5 ವಿಕೆಟುಗಳಿಂದ ಮಣಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ಪೇರಿಸಿತು. ಪ್ರಥ್ವಿ ಷಾ 24, ಪಂತ್ 39, ಪೊವೆಲ್ 43 ಗಳಿಸಿದರು. ಮುಂಬೈ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತರು. ರಮಣದೀಪ್ ಸಿಂಗ್ 2 ವಿಕೆಟ್ ಪಡೆದರೆ, ಡೇನಿಯಲ್ ಸ್ಯಾಮ್ಸ ಹಾಗು ಮಾರ್ಖಂಡೇ ತಲಾ 3 ವಿಕೆಟ್ ಪಡೆದರು.
ಮುಂಬೈಗೆ ಈ ಪಂದ್ಯ ಗೆದ್ದು ಏನೂ ಆಗಬೇಕಾಗಿರಲಿಲ್ಲ. ಬ್ಯಾಟಿಂಗ್ ಮಾಡುವಾಗ ಕೂಡ ಅದೇ ಮನಸ್ಥಿತಿಯಲ್ಲಿ ಇದ್ದಂತೆ ಕಂಡು ಬಂದರು ಮುಂಬೈ ಬ್ಯಾಟ್ಸ್ ಮ್ಯಾನ್ ಗಳು. ನಿಧಾನಗತಿಯ ಆರಂಭ ಪಡೆದ ಮುಂಬೈ 10 ಓವರುಗಳ ನಂತರ ಕೊಂಚ ಏರುಗತಿಯಲ್ಲಿ ರನ್ ದಾಖಲಿಸುತ್ತಾ ಸಾಗಿತು. ಅಲ್ಲಿಯವರೆಗೆ ಡೆಲ್ಲಿ ಕೈ ಮೇಲಾಗಿದ್ದ ಪಂದ್ಯ ನಿಧಾನವಾಗಿ ಮುಂಬೈ ಪರ ತಿರುಗಿತು. ಇಶಾನ್ ಕಿಶನ್ 48, ಬ್ರೆವಿಸ್ 37 ಗಳಿಸಿದರೆ ಕೊನೆಯಲ್ಲಿ ಟೈಮ್ ಡೇವಿಡ್ 34 ಹಾಗು ತಿಲಕ್ 21 ರನ್ ಬಾರಿಸಿ ಮುಂಬೈಗೆ ರೋಚಕ ಜಯ ತಂದಿತ್ತರು.
ಡೆಲ್ಲಿ ತಂಡ ತನ್ನ ಕೈಯಲ್ಲಿದ್ದ ಅವಕಾಶವನ್ನು ಕೈಯಾರೆ ಚೆಲ್ಲಿಕೊಂಡಿತು. ಪಂದ್ಯ ಡೆಲ್ಲಿ ಹಾಗು ಮುಂಬೈ ನಡುವೆ ಆದರೂ ಮೈದಾನದಲ್ಲಿ ಪ್ರೇಕ್ಷಕರು ಆರ್ಸಿಬಿ ಆರ್ಸಿಬಿ ಎಂದು ಕೂಗುತ್ತಿದ್ದುದು ಕಂಡು ಬಂತು.












































