Sports

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದ ಆರ್ಸಿಬಿ: ಪ್ಲೇ ಆಫ್ ಕನಸು ಜೀವಂತ

ವಾಂಖಡೆ: ಐಪಿಎಲ್ 2022ರ ಪ್ಲೆ ಆಫ್ ಹಂತಕ್ಕೆ ತಲುಪಲು ಇಂದಿನ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಟದ ಟೇಬಲ್ ಟಾಪರ್ ಗುಜರಾತ್ ಟೈಟಾನ್ಸ್ ಅನ್ನು 8 ವಿಕೆಟುಗಳಿಂದ ಮಣಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ ಸಾರಥ್ಯದಗುಜರಾತ್ ಟೈಟಾನ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು. ವೃದ್ಧಿಮಾನ್ ಸಹ 32, ಮಿಲ್ಲರ್ 34 ರನ್ ಗಳಿಸಿದರೆ ನಾಯಕ ಹಾರ್ದಿಕ್ ಪಾಂಡ್ಯ ಅಮೂಲ್ಯ 62 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾದರು. ಕೊನೆಯಲ್ಲಿ ರಶೀದ್ 6 ಬಾಲುಗಳಲ್ಲಿ 19 ರನ್ ಬಾರಿಸಿ 140 ರಿಂದ 150ರ ಒಳಗೆ ನಿಲ್ಲಬಹುದಾಗಿದ್ದ ಸ್ಕೊರ್ ಅನ್ನು 168ಕ್ಕೆ ವಿಸ್ತರಿಸಿದರು.

ಗೆಲ್ಲಲೇಬೇಕಾದ ಒತ್ತಡದಲ್ಲಿ ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ಆರಂಭಿಕ ಜೋಡಿ ಡುಪ್ಲೆಸಿಸ್ ಹಾಗು ಕೊಹ್ಲಿ ನಿರಾತಂಕವಾಗಿಯೇ ಗುಜರಾತ್ ಬೌಲರುಗಳನ್ನು ದಂಡಿಸುತ್ತಾ ಸಾಗಿದರು. ಮಾಜಿ ನಾಯಕ ಕೊಹ್ಲಿ ಬಿರುಸಿನ ಆಟವಾಡಿ 73 ರನ್ ಗಳಿಸಿದರೆ, ನಾಯಕ ಡುಪ್ಲೆಸಿಸ್ 44 ರನ್ ಕೊಡುಗೆ ನೀಡಿದರು. ಇವರಿಬ್ಬರ ಜತೆಯಾಟದಲ್ಲಿ ಮೊದಲ ವಿಕೆಟಿಗೆ 115 ರನ್ ಹರಿದು ಬಂತು. ಡುಪ್ಲೆಸಿಸ್ ವಿಕೆಟ್ ಕಳೆದುಕೊಂಡ ಬಳಿಕ ಬಂದ ಮ್ಯಾಕ್ಸ್ವೇಲ್ 222 ಸ್ಟ್ರೈಕ್ ರೇಟ್’ನೊಂದಿಗೆ ಕೇವಲ 18 ಬಾಲುಗಳಲ್ಲಿ 40 ರನ್ ಹೊಡೆದು ತಂಡದ ಗೆಲುವನ್ನು ಸುಲಭವಾಗಿಸಿದರು.

ಈ ಗೆಲುವಿನ ಮೂಲಕ 5ನೇ ಸ್ಥಾನಕ್ಕೆ ಕುಸಿದಿದ್ದ ಆರ್ಸಿಬಿ ಮತ್ತೆ 4ನೇ ಸ್ಥಾನಕ್ಕೆ ಜಿಗಿದಿದೆ. ಉಳಿದ ತಂಡಗಳ ಬಾಕಿಯಿರುವ ಪಂದ್ಯಗಳ ಫಲಿತಾಂಶದ ಮೇಲೆ ಆರ್ಸಿಬಿ ಪ್ಲೇ ಆಫ್ ಪ್ರವೇಶ ನಿಂತಿದೆ.

Exit mobile version