HomeTravelಬಾದಾಮಿಗೊಂದು ಸೋಲೋ ಟ್ರಿಪ್

ಬಾದಾಮಿಗೊಂದು ಸೋಲೋ ಟ್ರಿಪ್

  • ಬರಹ: ಪ್ರಜ್ಞಾ ಹೆಬ್ಬಾರ್

ಪ್ರವಾಸ ಹೋಗುವಾಗ ಪ್ಯಾಕೇಜ್‌ ಮೂಲಕ ಟಿಕೇಟ್‌ ಕಾಯ್ದಿರಿಸಿ ಸುತ್ತಾಡುವ ಜಾಯಮಾನ ನನ್ನದಲ್ಲ. ಪ್ರವಾಸ ಮಾಡಬೇಕು ಅನಿಸಿದಾಗ ನಾಲ್ಕು ಬಟ್ಟೆ ಬ್ಯಾಗಿಗೆ ಹಾಕಿ ಸೀದಾ ರೈಲ್ವೆ ಸ್ಟೇಷನ್‌ ಹೋಗೋದು ಅಷ್ಟೇ. ಸಿಕ್ಕಾಪಟ್ಟೆ ಪ್ಲಾನ್‌ ಮಾಡಿ, ಐಷಾರಾಮಿ ಹೋಟೆಲ್‌ ನಲ್ಲಿ ಉಳಿದುಕೊಂಡು, ಎಸಿ ಕಾರ್‌ ನಲ್ಲಿ ಸುತ್ತಾಡಿದರೆ ಅಂತಹ ಪ್ರವಾಸದಲ್ಲಿ ಜೀವಕಳೆ ಇರುವುದಿಲ್ಲ, ಎಲ್ಲವೂ ಸಿಕ್ಕಾಪಟ್ಟೆ ಆರ್ಟಿಫಿಶಿಯಲ್ ಅನಿಸುತ್ತದೆ. ಸೋಲೋ ಟ್ರಿಪ್‌ ಅಥವಾ ಚಡ್ಡಿದೋಸ್ತುಗಳ ಜೊತೆ ತೆರಳಿದಾಗ ಮನಸ್ಸಿಗೆ ಬಂದದ್ದು ಮಾಡುವ ಕಂಫರ್ಟ್‌ ಇರುತ್ತದೆ. ಹೀಗೆ ಒಂದು ವೀಕೆಂಡ್‌ ಸಮೀಪಿಸುತ್ತಿದ್ದಾಗ ನನಗೆ ಹೋಗಬೇಕೆನಿಸಿದ್ದು ಚಾಲುಕ್ಯರ ರಾಜಧಾನಿ ಬಾದಾಮಿಗೆ. ಇತಿಹಾಸ ಪಠ್ಯಪುಸ್ತಕದಲ್ಲಿ ಚಾಲುಕ್ಯರ ಇತಿಹಾಸವನ್ನು ಓದುತ್ತಿದ್ದಾಗ, ಅವರು ರಾಜ್ಯಭಾರ ಮಾಡಿದ ಕಡೆ ಒಮ್ಮೆ ಅಡ್ಡಾಡಬೇಕು ಅನಿಸಿತ್ತು. ಕೊನೆಗೂ ಆ ಘಳಿಗೆ ಬಂತು. ರೈಲಿನಲ್ಲಿ ಬೆಂಗಳೂರಿನಿಂದ ಬಾದಾಮಿಗೆ ಬಂದಿಳಿದೆ. ಅಂದಹಾಗೆ ನನ್ನದು ಏಕಾಂಗಿ ಪಯಣ!

ನಾಲ್ಕೈದು ಹೋಟೆಲ್‌ ಗೆ ತೆರಳಿ, ನಂತರ ಇಷ್ಟವಾದ ಹೋಟೆಲ್‌ ನಲ್ಲಿ ಗಂಟುಮೂಟೆ ಇರಿಸಿ ಸೀದಾ ಕಾಲ್ನಡಿಗೆಯಲ್ಲಿ ಹೊರಟೆ. ಬಾದಾಮಿ KSRTC ಬಸ್‌ ನಿಲ್ದಾಣದಿಂದ ಬಾದಾಮಿ ಗುಹಾಂತರ ದೇವಾಲಯಗಳ ಸಮೂಹಕ್ಕೆ ಸುಮಾರು ಒಂದು ಕಿಮೀ ದೂರ.

ನಾಲ್ಕು ಗುಹಾಲಯಗಳನ್ನು ಒಂದೇ ಬಂಡೆಯಿಂದ ಕೆತ್ತಲಾಗಿದೆ. ಕೊನೆಯ ಗುಹಾಲಯದಿಂದ ನಿಂತು ನೋಡಿದಾಗ, ಅಗಸ್ತ್ಯ ತೀರ್ಥ ಸರೋವರದ ವಿಹಂಗಮ ನೋಟ ಮನಸೂರೆಗೊಳಿಸುತ್ತದೆ. 5ನೇ ಶತಮಾನದಲ್ಲಿ ನಿರ್ಮಿಸಿದ ಈ ಸರೋವರದಲ್ಲಿ ಸ್ನಾನ ಮಾಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಮೊದಲ ಗುಹೆಯನ್ನು ಈಶ್ವರನಿಗೆ, ಎರಡನೇ ಹಾಗೂ ಮೂರನೇ ಗುಹೆಯನ್ನು ಮಹಾವಿಷ್ಣುವಿಗೆ, ಹಾಗೂ ನಾಲ್ಕನೆಯ ಜೈನಗುಹೆಯನ್ನು ತೀರ್ಥಂಕರರಿಗೆ ಅರ್ಪಿಸಲಾಗಿದೆ.

ಗುಹಾಂತರ ದೇವಾಲಯಗಳ ಕೆತ್ತನೆಗಳನ್ನು ನೋಡುತ್ತಾ ಅಲ್ಲಿಂದ ಕೆಳಗಿಯುವಷ್ಟರಲ್ಲಿ ಹತ್ತು ಗಂಟೆ ಆಗಿತ್ತು. ಅಷ್ಟೊತ್ತಿಗಾಗಲೇ ಸೂರ್ಯ ಝಳಪಿಸುತ್ತಾ ಇದ್ದ. ಜಾಸ್ತಿ ಸೆಕೆ ಇರುವ ಸ್ಥಳಗಳಿಗೆ ತೆರಳುವಾಗ, ಹತ್ತಿಯ ಉಡುಪು, ಶಾಲು, ಹಾಗೂ ಸನ್ ಗ್ಲಾಸ್, ಸನ್ ಸ್ಕ್ರೀನ್ ಇಟ್ಟುಕೊಳ್ತೇನೆ.

ನಾಲ್ಕು ಹೆಜ್ಜೆ ಮುಂದಿಟ್ಟರೆ ಕನ್ನಡದ ಹಳೆಯ ಶಾಸನಗಳಲ್ಲಿ ಒಂದಾದ ಕಪ್ಪೆ ಅರಭಟ್ಟನ ಶಾಸನ ಸಿಗುತ್ತದೆ. ಹಳಗನ್ನಡ ಲಿಪಿಯಲ್ಲಿ ರಚಿತವಾದ ಈ ಶಾಸನದಲ್ಲಿ ಕನ್ನಡದ ಮೊಟ್ಟಮೊದಲ ತ್ರಿಪದಿ ಅಡಕವಾಗಿದೆ. ವಿಶಾಲವಾದ ಅಗಸ್ತ್ಯ ತೀರ್ಥದ ಪೂರ್ವ ದಿಕ್ಕಿನಲ್ಲಿ ಭೂತನಾಥ ಸಂಕೀರ್ಣವಿದೆ. ಶಿವನಿಗಾಗಿ ನಿರ್ಮಿಸಿದ ಈ ದೇಗುಲ ಸಂಕೀರ್ಣದ ತೆರೆದ ಮಂಟವೂ ಕೊಳದವರಗೆ ಚಾಚಿ ನಿಂತಿದೆ. ಈ ಸಂಕೀರ್ಣವನ್ನು ಬಾದಾಮಿ ಕೋಟೆಗೆ ಎದುರಾಗಿ ಕಟ್ಟಲಾಗಿದೆ.

ಬಾದಾಮಿ ಕೋಟೆ ಹತ್ತುವಾಗ ಹಲವು ದೇಗುಲಗಳು ಸಿಗುತ್ತವೆ. ಕೆಳಗಣ ಶಿವ ದೇವಾಲಯ, ಮೇಲ್ಗಣ ಶಿವ ದೇವಾಲಯ. ಬಾದಾಮಿ ಕೋಟೆಯ ತುದಿಯಲ್ಲಿ ಬಾದಾಮಿ ನಗರದ ದೃಶ್ಯ ಕಾಣಲು ಸಿಗುತ್ತದೆ. ಬಾದಾಮಿ ಕೋಟೆಯ ಪ್ರವೇಶದ್ವಾರದ ಹತ್ತಿರ ಬಾದಾಮಿ ಪ್ರಾಚ್ಯ ಸಂಗ್ರಹಾಲಯ ಇದೆ. ಉತ್ಖನನ ಸಂದರ್ಭದಲ್ಲಿ ಸಿಕ್ಕಿದ ಹಲವು ಶಿಲಾ ಕೆತ್ತನೆಗಳನ್ನು ಇಲ್ಲಿ ಇಡಲಾಗಿದೆ.

ಬಾದಾಮಿಯಲ್ಲಿ ನೋಡಬೇಕಾದ ಇತರ ಸ್ಥಳಗಳೆಂದರೆ, ಬನಶಂಕರಿ ದೇವಸ್ಥಾನ, ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ಮಹಾಕೂಟ, ಶಿವಯೋಗಿ ಮಂದಿರ. ಶಿವಯೋಗಿ ಮಂದಿರದ ಬೃಹತ್‌ ಮರದ ರಥ ಭಾರತದ ಅತೀ ಎತ್ತರದ ರಥಗಳಲ್ಲಿ ಒಂದು. 65 ಅಡಿ ಎತ್ತರವಿರುವ ಈ ರಥ ಏಷ್ಯಾ ಖಂಡದಲ್ಲೇ ಎರಡನೇ ಎತ್ತರದ ರಥ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಮರುದಿನ ಕ್ಯಾಬ್‌ ಮಾಡಿ ಪಟ್ಟದಕಲ್ಲಿನ ಬಳಿ ಪಯಣಿಸಿದೆ. ಪಟ್ಟದಕಲ್ಲು ದೇಗುಲಗಳ ಸಮೂಹದಲ್ಲಿ ಹಲವು ದೇಗುಲಗಳಿವೆ. ಬಹುತೇಕ ಕಡೆ ಶಿವಲಿಂಗ ಕಾಣಸಿಗುತ್ತದೆ. ಹೀಗಾಗಿ ಚಾಲುಕ್ಯರು ಅಪರಿಮಿತ ಶೈವ ಭಕ್ತರಾಗಿದ್ದರು ಎಂಬುದನ್ನು ಗಮನಿಸಬೇಕು.

ಪಟ್ಟದಕಲ್ಲು ದೇಗುಲಗಳ ಸಮೂಹ ಬಿಟ್ಟು ಪಟ್ಟದಕಲ್ಲಿನಲ್ಲಿ ಹಲವಾರು ಅಷ್ಟಾಗಿ ಹೆಸರುವಾಸಿಯಲ್ಲದ ಕೆಲವು ಐತಿಹಾಸಿಕ ಸ್ಥಳಗಳಿವೆ. ಅವುಗಳಲ್ಲಿ ಕೆಲವನ್ನು ನನ್ನ ಡ್ರೈವರ್‌ ತೋರಿಸಿದರು. ಇದರಲ್ಲಿ ಗಳಗನಾಥ ಮಂದಿರವೂ ಒಂದು.

ಮುಂದೆ ಐಹೊಳೆ ಕಡೆ ಪಯಣ. ಅಲ್ಲಿ ದುರ್ಗಾ ಮಂದಿರ, ಲಡ್‌ ಖಾನ ದೇವಾಲಯ ಪ್ರಮುಖ ಆಕರ್ಷಣೆ. ದುರ್ಗಾ ಮಂದಿರದ ಹತ್ತಿರವೇ ಮ್ಯೂಸಿಯಂ ಇದೆ. ಇಲ್ಲೇ ಹತ್ತಿರ ಜೈನ ಗುಹಾಂತರ ದೇಗುಲವಿದ್ದು, ಒಂದೇ ಕಲ್ಲಿನಿಂದ ಇದನ್ನು ಕೆತ್ತಲಾಗಿದೆ..

ಐಹೊಳೆಯಲ್ಲಿ ಇನ್ನೂ ಹಲವು ಸ್ಥಳಗಳಿದ್ದು ಸಮಯದ ಅಭಾವದಿಂದ ನೋಡಲಾಗಲಿಲ್ಲ. ಮೇಗುತಿ ಜೈನ ದೇವಾಲಯ, ಹುಚ್ಚಿಮಲ್ಲಿ ಗುಡಿ ಹೀಗೆ ಇನ್ನೂ ಹಲವು ಸ್ಥಳಗಳು ಇಲ್ಲಿವೆ. ಮುಂದೆ ಬಸವಣ್ಣ ಐಕ್ಯವಾದ ಕೂಡಲಸಂಗಮಕ್ಕೆ ಹೊರಟೆ. ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮ ನಾಡು. ಐಕ್ಯ ಲಿಂಗ ಇಲ್ಲಿನ ವಿಶೇಷತೆ.

ನಂತರ ಹೋಗಿದ್ದು ಆಲಮಟ್ಟಿಗೆ. ಅಲಮಟ್ಟಿ ಅಣೆಕಟ್ಟು, ಅಲಮಟ್ಟಿ ಹಿನ್ನೀರು. ರಾಕ್‌ ಕಟ್‌ ಗಾರ್ಡನ್‌ ನೋಡಿ ಮತ್ತೆ ವಾಪಸ್‌ ನಾನು ತಂಗಿದ್ದ ಸ್ಥಳಕ್ಕೆ ಬಂದೆ. ಅಲ್ಲಿಗೆ ಎರಡು ದಿನದ ಬಾದಾಮಿ ಪ್ರವಾಸ ಮುಗಿದಿತ್ತು. ಮರಳಿ ಗೂಡಿಗೆ ಬಂದೆ.

ಮಾಹಿತಿ :
ಬೆಂಗಳೂರಿನಿಂದ ಬಾದಾಮಿಗೆ (ರಸ್ತೆ ಮೂಲಕ) : ಸುಮಾರು 449 ಕಿಮೀ , 9 ಗಂಟೆ ಪ್ರಯಾಣ
ಮಂಗಳೂರಿನಿಂದ ಬಾದಾಮಿಗೆ (ರಸ್ತೆ ಮೂಲಕ) : ಸುಮಾರು 467 ಕಿಮೀ , 9:30 ಗಂಟೆ ಪ್ರಯಾಣ

ಬಾದಾಮಿಯಲ್ಲಿ ತಂಗಲು ಬಾದಾಮಿ ಬಸ್ ನಿಲ್ದಾಣದ‌ ಸುತ್ತಮುತ್ತ ಹಲವು ಲಾಡ್ಜ್ ಗಳು ಇವೆ. ಒಂದೆರಡನ್ನು ಹೆಸರಿಸುವುದಾದರೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮಯೂರ ಚಾಲುಕ್ಯ ಹೋಟೆಲ್ ಇದ್ದು ಅಚ್ಚುಕಟ್ಟಾಗಿ, ಶುಚಿಯಾಗಿ ಇದೆ. ಪಾರ್ಕಿಂಗ್ ಸೌಲಭ್ಯ ಕೂಡ ಇದ್ದು, ಸಸ್ಯಾಹಾರಿ ಮಾಂಸಾಹಾರಿ ಹೋಟೆಲ್ ಅನ್ನು ಒಳಗೊಂಡಿದೆ. ಹಾಗೆಯೆ ಖಾಸಗಿ ಹೊಟೇಲ್ ಇಷ್ಟಪಡುವವರಿಗೆ ಕ್ಲಾರ್ಕ್ಸ್ ಇನ್ ಹೋಟಲ್ ಕೂಡ ಬಾದಾಮಿ ನಗರದೊಳಗೆ ಇದೆ. ಇದು ಕೂಡ ಉತ್ತಮ ದರ್ಜೆಯ ಸೇವೆಯನ್ನು ನೀಡುತ್ತದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments