
ದೆಹಲಿ: ದೆಹಲಿಯಲ್ಲಿ ಭಾರೀ ಆಫ್ನಿ ದುರಂತವೊಂದು ಸಂಭವಿಸಿದ್ದು ೨೭ ಮಂದಿ ಸಜೀವ ದಹನಗೊಂಡಿದ್ದಾರೆ. ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪವಿರುವ ಕಟ್ಟಡದಲ್ಲಿ ಈ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಶುಕ್ರವಾರ ಸಂಜೆ 4.40ರ ಸಮಯಕ್ಕೆ ಮುಂಡ್ಕ ಮೆಟ್ರೋ ನಿಲ್ದಾಣದ ಪಿಲ್ಲರ್ ಸಂಖ್ಯೆ 544ರ ಸಮೀಪವಿರುವ ಮೂರಂತಸ್ಥಿನ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇಲ್ಲಿವರೆಗೆ 27 ಮಂದಿ ಸಾವನ್ನಪ್ಪಿದ್ದು ಹಲವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ. ಸುಮಾರು 30 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ.
ಕಟ್ಟಡದಲ್ಲಿರುವ ಸಿಸಿಟಿವಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಹಲವು ಕಾರ್ಮಿಕರು ಕಟ್ಟಡದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಸುಮಾರು 60-70 ಮಂದಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ಹಾಗು ೪ಜಿ ರೌಟರ್ ತಯಾರಿಸುವ ಕೋಫ್ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕಂಪನಿ ಮಾಲೀಕರಾದ ಹರೀಶ್ ಗೋಯೆಲ್ ಮತ್ತು ವರುಣ್ ಗೋಯೆಲ್ ಅವರನ್ನು ಬಂಧಿಸಿದ್ದೇವೆ ಎಂದು ಡಿಸಿಪಿ ಸಮೀರ್ ಶರ್ಮಾ ತಿಳಿಸಿದ್ದಾರೆ.












































