
ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಇಂದು ತನ್ನ ಮುಖ್ಯಮಂತ್ರಿ ಮುಖವನ್ನು ಪ್ರಕಟಿಸಿದ್ದು ಹಾಲಿ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ ಅವರಿಗೇ ಹೈಕಮಾಂಡ್ ಮಣೆ ಹಾಕಿದೆ. ಈ ಮೂಲಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅಭಿಪ್ರಾಯವನ್ನು ಕಡೆಗಣಿಸಲಾಗಿದ್ದು ಇವರಿಬ್ಬರ ಮುಸುಕಿನ ಗುದ್ದಾಟದಲ್ಲಿ ಚನ್ನಿಗೆ ರಾಹುಲ್ ಗಾಂಧಿ ಅಸ್ತು ಎಂದಿದ್ದಾರೆ.
ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಗೌಪ್ಯವೂ ಸಭೆಯ ನಂತರ ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಕಾಂಗ್ರೆಸ್ ಭಾನುವಾರ ಆಯ್ಕೆ ಮಾಡಿದೆ. ಲೂಧಿಯಾನದಲ್ಲಿ ಅಂಡೆದ ಸಮಾವೇಶದಲ್ಲಿ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಈ ನಿರ್ಧಾರವನ್ನು ಘೋಷಿಸಿದರು.
“ಪಂಜಾಬ್‌ಗೆ ಬಡವರನ್ನು ಅರ್ಥಮಾಡಿಕೊಳ್ಳುವ, ಅವರ ಆತಂಕವನ್ನು ಅರಿಯುವ ನಾಯಕನ ಅಗತ್ಯವಿದೆ. ಹಾಗಾಗಿ ನಾವು ಚರಂಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆರಿಸಿದ್ದೇವೆ. ಇಡೀ ಕಾಂಗ್ರೆಸ್ ಈಗ ಪಂಜಾಬ್ ಅನ್ನು ಪರಿವರ್ತಿಸುವ ದೃಷ್ಟಿಯಲ್ಲಿ ಕೆಲಸ ಮಾಡುತ್ತದೆ” ಎಂದು ರಾಹುಲ್ ಗಾಂಧೀ ಹೇಳಿದರು.
ಮುಂದುವರೆದು ಮಾತನಾಡಿದ ರಾಹುಲ್ ಗಾಂಧಿ, “ಚನ್ನಿ ಅವರ ತಂದೆ ಜೀವನೋಪಾಯಕ್ಕಾಗಿ ಏನು ಮಾಡಿದರು ಎಂದು ನಾನು ಅವರನ್ನು ಕೇಳಿದೆ. ಅವರ ಜೀವನವನ್ನು ತಿಳಿದ ಮೇಲೆ ನನಗೆ ಅನಿಸಿತು ಅವರು ಖಂಡಿತ ಬಡತನವನ್ನು ಆಳವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂಬುದಾಗಿ” ಎಂದು ಹೇಳಿದರು.
ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿರುವ ಚನ್ನಿ, “ಇದು ದೊಡ್ಡ ಜವಾಬ್ದಾರಿ. ಕಾಂಗ್ರೆಸ್‌ನ ಭರವಸೆಯ ಮುಖ್ಯಮಂತ್ರಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಪಂಜಾಬ್‌ಗೆ ಕೃತಜ್ಞನಾಗಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಪಂಜಾಬ್ ಜನತೆಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ. ಕಳೆದ 111 ದಿನಗಳಲ್ಲಿ ನಾವು ಪಂಜಾಬ್ ಅನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಶ್ರಮಿಸುತ್ತಿರುವುದನ್ನು ನೀವು ನೋಡಿದ್ದೀರಿ. ಮುಂದೆ ಕೂಡ ಹೊಸ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಪಂಜಾಬ್ ಮತ್ತು ಪಂಜಾಬಿ ಜನರನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುವ ಭರವಸೆ ನೀಡುತ್ತೇನೆ” ಎಂದು ಹೇಳಿದರು.
ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣೆಗೂ ಮೊದಲೇ ಘೋಷಣೆ ಮಾಡುವುದನ್ನು ವಿರೋಧಿಸಿದ್ದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿದ್ದು, ಜನರೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದು, ಚುನಾವಣೆ ನಂತರ ಜನರಿಂದ ಚುನಾಯಿತರಾದ ಕಾಂಗ್ರೆಸ್ ಶಾಸಕರು ಮುಂದೆ ತಮ್ಮ ನಾಯಕನನ್ನು ಆರಿಸಲಿದ್ದಾರೆ ಎಂದಿದ್ದರು. ಈಗ ರಾಹುಲ್ ಗಾಂಧಿ ಹಾಲಿ ಮುಖ್ಯಮಂತ್ರಿ ಚನ್ನಿಯವರನ್ನೇ ಚುನಾವಣೆಗೆ ಮುಖ್ಯಮಂತ್ರಿ ಮುಖವನ್ನಾಗಿ ಘೋಷಿಸಿದ್ದು ಪಕ್ಷದೊಳಗೆ ಬಣ ರಾಜಕೀಯಕ್ಕೆ ಆಸ್ಪದ ಮಾಡಿಕೊಟ್ಟಂತಾಗಲಿದೆ ಎಂಬುದು ರಾಜಕೀಯ ಪರಿಣತರ ಅನಿಸಿಕೆ. ಹಾಗೆಯೇ ಸಿದ್ದು ಅವರ ಮುಂದಿನ ನಡೆ ಬಗ್ಗೆಯೂ ಕುತೂಹಲ ಮೂಡಿಸಿದೆ.












































