
ಮಾಸ್ಕೋ: ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ರಷ್ಯಾ ಇದೀಗ ಜಾಗತಿಕವಾಗಿ ವ್ಯಾಪಕ ವಿರೋಧ ಎದುರಿಸುತ್ತಿದ್ದು ಈ ಯುದ್ಧದಿಂದ ರಷ್ಯಾಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಯುದ್ಧದಿಂದಾದ ನೇರ ನಷ್ಟದ ಹೊರತಾಗಿ ರಾಜತಾಂತ್ರಿಕವಾಗಿ ಹಲವು ನಷ್ಟಗಳನ್ನು ರಷ್ಯಾ ಹೊಂದಿದೆ.
ಯುದ್ಧದ ಪರಿಣಾಮ ರಷ್ಯಾದ ಕರೆನ್ಸಿ ರೂಬಲ್ ಅಮೇರಿಕಾದ ಡಾಲರ್ ಎದುರು ಭಾರೀ ಕುಸಿತ ಕಂಡಿದೆ. ತೀವ್ರವಾಗಿ ರೂಬಲ್ ಕುಸಿತ ಹೊಂದಿದ್ದು ಶೇಕಡಾ 40ರಷ್ಟು ಮೌಲ್ಯ ಕಡಿಮೆಯಾಗಿದೆ. ನ್ಯಾಟೋ ಹಾಗು ಯುರೋಪಿಯನ್ ರಾಷ್ಟ್ರಗಳು ರಷ್ಯಾದ ಮೇಲೆ ಹೇರಿದ ಕಠಿಣ ನಿರ್ಬಂಧಗಳಿಂದಾಗಿ ರಷ್ಯಾ ಕರೆನ್ಸಿ ರೂಬಲ್ ಮೌಲ್ಯ ಕುಸಿದಿದೆ.
ಮತ್ತೊಂದೆಡೆ ರಷ್ಯಾ ವಿಮಾನಗಳಿಗೆ ಹೆಚ್ಚಿನ ರಾಷ್ಟ್ರಗಳು ವಾಯುಮಾರ್ಗವನ್ನು ನಿರ್ಬಂಧಿಸಿದೆ. ಪರಿಣಾಮ ರಷ್ಯಾ ವಿದೇಶಾಂಗ ಸಚಿವರ ವಿಶ್ವಸಂಸ್ಥೆ ಪ್ರವಾಸ ರದ್ದಾಗುವಂತಾಗಿದೆ. ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್ ಅವರು ಜಿನೀವಾದಲ್ಲಿರುವ ವಿಶ್ವಸಂಸ್ಥೆ ಕಚೇರಿಗೆ ಒಂದು ಮಹತ್ತರ ಸಭೆಗಾಗಿ ಪ್ರಯಾಣ ಮಾಡುವವರಿದ್ದರು. ಆದರೆ, ರಷ್ಯಾ ನೆರೆಹೊರೆಯ ಯೂರೋಪಿಯನ್ ರಾಷ್ಟ್ರಗಳು ರಷ್ಯಾಗೆ ತಮ್ಮ ವಿಮಾನಯಾನ ಮಾರ್ಗವನ್ನು ನಿರ್ಬಂಧಿಸಿದೆ. ಅಮೆರಿಕ, ಬ್ರಿಟನ್, ಆಸ್ಚ್ರೇಲಿಯಾ, ಕೆನಡಾ, ಲುಕ್ಸಂಬರ್ಗ್, ಬಲ್ಗೇರಿಯ, ಪೋಲೆಂಡ್, ಬೆಲ್ಜಿಯಂ, ಜೆಕ್ ಗಣರಾಜ್ಯ, ಈಸ್ಟೊನಿಯ, ಲಾಟ್ವಿಯಾ, ಲಿಥುವೇನಿಯಾ, ಫಿನ್‌ಲ್ಯಾಂಡ್, ಜರ್ಮನಿ, ಸ್ಲೋವೇನಿಯಾ, ಡೆನ್ಮಾರ್ಕ್ ರಷ್ಯಾ ವಿಮಾನಗಳಿಗೆ ತಮ್ಮ ವಾಯುಮಾರ್ಗವನ್ನು ನಿರ್ಬಂಧಿಸಿವೆ.
ಅಂತರರಾಷ್ಟ್ರೀಯ ಬ್ಯಾಂಕ್ ವ್ಯವಹಾರಗಳಿಂದಲೂ ರಷ್ಯಾವನ್ನು ಬ್ಯಾನ್ ಮಾಡಲಾಗಿದ್ದು ಅಂತರರಾಷ್ಟ್ರೀಯ ಹಣ ವರ್ಗಾವಣೆಗೆ ಅಗತ್ಯವಾದ ಸ್ವಿಫ್ಟ್ ಸೇವೆಯಿಂದ ರಷ್ಯಾವನ್ನು ನಿರ್ಬಂಧಿಸಲಾಗಿದೆ. ಅಮೇರಿಕ, ಜರ್ಮನಿ, ಜಪಾನ್ ಮತ್ತು ಯುರೋಪಿಯನ್ ರಾಷ್ಟ್ರಗಳು ಈ ಪಟ್ಟಿಯಲ್ಲಿ ಸೇರಿವೆ.












































