
ಮಂಗಳೂರು: ಮಂಗಳೂರಿನ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾ ಈ ಹಿಂದೆ ಹಿಂದೂ ದೇವಾ ಸಾನಿಧ್ಯವಿದ್ದ ಜಾಗವಾಗಿತ್ತು ಎಂದು ಕೇರಳದ ತಂತ್ರಿಗಳು ನಡೆಸಿದ ತಾಂಬೂಲ ಪ್ರಶ್ನೆಯಲ್ಲಿ ಬಹಿರಂಗಗೊಂಡಿದೆ. ಈ ದರ್ಗಾದ ಮುಂಭಾಗವನ್ನು ನವೀಕರಣಕ್ಕಾಗಿ ಕೆಡವಿದ ಸಂದರ್ಭ ಒಳಭಾಗದಲ್ಲಿ ದೇವಸ್ಥಾನದ ಕಲಶ, ತೋಮರ, ಕಂಬಗಳ ರೀತಿಯ ಮಾದರಿ ಪತ್ತೆಯಾಗಿತ್ತು. ದರ್ಗಾವು ಈ ಹಿಂದೆ ಜೈನ ಅಥವಾ ಹಿಂದೂ ದೇವಸ್ಥಾನ ಆಗಿದ್ದಿರುವ ಸಾಧ್ಯತೆ ಕುರಿತು ಕಾನೂನು ಹೋರಾಟಕ್ಕೂ ಮುನ್ನ ವಿಶ್ವ ಹಿಂದೂ ಪರಿಷತ್ ತಾಂಬೂಲ ಪ್ರಶ್ನೆಯ ಮೊರೆ ಹೋಗಿತ್ತು.
ಮಳಲಿಯ ರಾಮಾಂಜನೇಯ ಮಂದಿರದಲ್ಲಿ ಕೇರಳದ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರು ನಡೆಸಿದ ತಾಂಬೂಲ ಪ್ರಶ್ನೆಯಲ್ಲಿ ಈ ಸ್ಪೋಟಕ ಅಂಶ ಹೊರ ಬಿದ್ದಿದ್ದು ಈ ಸ್ಥಳ ಈ ಹಿಂದೆ ಗುರು ಪೀಠವಾಗಿರುವ ಸಾಧ್ಯತೆ ಕಂಡು ಬರುತ್ತಿದೆ. ಇಲ್ಲಿ ದೇವ ಸಾನಿಧ್ಯವಿದ್ದು ಈ ಸ್ಥಳವನ್ನು ಜೀರ್ಣೋದ್ಧಾರಗೊಳಿಸುವುದು ಅವಶ್ಯಕ ಎಂದು ಹೇಳಿದ್ದಾರೆ. ಸದ್ಯಕ್ಕೆ ಈ ಭೂಮಿಯಲ್ಲಿರುವ ಯಾರಿಗೂ ನೆಮ್ಮದಿ ಇಲ್ಲದಾಗಿದೆ. ಆ ಸ್ಥಳ ಈಗ ದರ್ಗಾದಿಂದಾಗಿ ಅಶುದ್ಧವಾಗಿದ್ದರೂ ಈಗಲೂ ದೈವ ಕಲೆ ಇದೆ. ವಿವಾದಿತ ಜಾಗದ ಉತ್ತರಕ್ಕೆ ಮಹಾ ಪುರುಷ ಗುರುವೊಬ್ಬ ತಪಸ್ಸು ಮಾಡಿದ್ದಾನೆ. ಹಾಗಾಗಿ ಆ ಸ್ಥಳದ ಬಗ್ಗೆ ಮತ್ತಷ್ಟು ಹೆಚ್ಚಿನ ಮಾಹಿತಿ ತಿಳಿಯಲು ಅಷ್ಟಮಂಗಲ ಪ್ರಶ್ನೆ ನಡೆಸಬೇಕು ಎಂದು ತಂತ್ರಿಗಳು ಹೇಳಿದರು.

ಶಿವ ಹಾಗು ದುರ್ಗಾ ದೇವಿಯ ಸಾನಿಧ್ಯ : ಪ್ರಸ್ತುತ ವಿವಾದಿತ ದರ್ಗಾ ಇರುವ ಜಾಗದಲ್ಲಿ ಶಿವ ಹಾಗು ದುರ್ಗಾ ದೇವಿಯ ಸಾನಿಧ್ಯ ಇದ್ದ ಬಗ್ಗೆ ತಿಳಿದು ಬಂದಿದ್ದು, ಆ ಸಾನಿಧ್ಯದಿಂದಾಗಿ ಈಗಲೂ ಆ ಜಾಗದಲ್ಲಿ ದೇವ ಕಳೆ ಕಂಡು ಬರುತ್ತಿದೆ. ಆದರೆ ದೇಗುಲ ನಾಶ ಮಾಡಿ ದರ್ಗಾ ನಿರ್ಮಾಣದಿಂದಾಗಿ ಸ್ಥಳ ಅಶುದ್ಧಗೊಂಡಿದೆ. ಸ್ಥಳ ಶುದ್ಧಿ ನಡೆದು ದೇಗುಲ ನಿರ್ಮಾಣ ಕಾರ್ಯ ಎಲ್ಲ ಸಮುದಾಯದ ಸಹಾಯದಿಂದ ನಡೆಯಬೇಕು. ಇದು ಅವಶ್ಯಕ ಹಾಗು ಇದಕ್ಕೆ ದೇವರ ಅನುಗ್ರಹವೂ ಇದೆ. ಇಲ್ಲದಿದ್ದರೆ ಆ ಸ್ಥಳದಲ್ಲಿ ಇರುವವರಿಗೆ ನೆಮ್ಮದಿ ಇಲ್ಲದಂತಾಗಲಿದೆ ಎಂದು ತಂತ್ರಿಗಳು ತಿಳಿಸಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು, ನಮ್ಮ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd












































