
ಗುವಾಹಟಿ: ಟಿ20 ಸರಣಿಯನ್ನು ವಶಪಡಿಸಿಕೊಂಡ ಬಳಿಕ ಭಾರತ ತಂಡ ಪ್ರವಾಸಿ ಶ್ರೀಲಂಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು 67 ರನ್ ಗಳಿಂದ ಗೆದ್ದು ಶುಭಾರಂಭ ಮಾಡಿದೆ.
ಗುವಾಹಟಿಯಲ್ಲಿ ಇಂದು (ಮಂಗಳವಾರ) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿತು. ಏಕದಿನದಲ್ಲಿ ತನ್ನ 45ನೇ ಶತಕ ಪೂರೈಸಿದ ವಿರಾಟ್ ಕೊಹ್ಲಿ ಮತ್ತೆ ತನ್ನ ವಿರಾಟ್ ದರ್ಶನ ನೀಡಿದರು. ನಾಯಕ ರೋಹಿತ್ ಶರ್ಮಾ (83) ಮತ್ತು ಶುಭಮನ್ ಗಿಲ್ (70) ಜೋಡಿ ಭಾರತಕ್ಕೆ ಅಬ್ಬರದ ಆರಂಭ ಒದಗಿಸಿದರು. 374 ರನ್ಗಳ ಬೃಹತ್ ಗುರಿ ಪಡೆದ ಲಂಕಾ ಉತ್ತರವಾಗಿ ಶ್ರೀಲಂಕಾ ತಂಡ 8 ವಿಕೆಟ್ ಕಳೆದುಕೊಂಡು 306 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 67 ರನ್ ಗಳಿಂದ ಭಾರತ ಜಯಭೇರಿ ಬಾರಿಸಿತು.
ಶ್ರೀಲಂಕಾ ಪರ ಆರಂಭಿಕ ಆಟಗಾರ ಪಾತುಮ್ ನಿಶಾಂಕ 72 ರನ್ ಪೇರಿಸಿದರೆ, ನಾಯಕ ದಶುನ್ ಶಂಕಾ ಅದ್ಭುತ ಇನ್ನಿಂಗ್ಸ್ ಆಡಿ ಅಜೇಯ ಶತಕ ಬಾರಿಸಿ ಶ್ರೀಲಂಕಾ 300 ರಬ್ ಗಡಿ ದಾಟುವಲ್ಲಿ ನೆರವಾದರು. ಭಾರತದ ಪರ ಬೌಲಿಂಗಿನಲ್ಲಿ ಉಮ್ರಾನ್ ಮಲಿಕ್ 3 ವಿಕೆಟ್, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಭಾರತ ಏಕದಿನ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.












































