
ಲೇಖನ : ವಿನಾಯಕ ಗಾವಂಕರ್
ಅದು 1989 ನೆಯ ವರ್ಷ, ಜರ್ಮನಿಯ ಸೋವಿಯತ್ ಒಕ್ಕೂಟದ ರಾಯಭಾರ ಕಛೇರಿಯ ಸುತ್ತ ಜರ್ಮನಿಯ ಜನರು ಸೇರಿದ್ದರು ಹಾಗೂ ಸೋವಿಯತ್ ಒಕ್ಕೂಟದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಅದೇ ಸೋವಿಯತ್ ಒಕ್ಕೂಟದ ರಾಯಭಾರ ಕಛೇರಿಯಲ್ಲಿದ್ದ ಗೂಢಚಾರಿಯೊಬ್ಬ ಇವೆಲ್ಲವನ್ನೂ ಗಮನಿಸುತ್ತಿದ್ದ, ಅಲ್ಲಿನ ಆತಂಕದ ಕ್ಷಣಗಳಿಗೆ ಆತ ಸಾಕ್ಷಿಯಾಗುತ್ತಿದ್ದ . ರಾಯಭಾರ ಕಛೇರಿಗೆ ಯಾವುದೇ ಸಂದರ್ಭದಲ್ಲಾದರೂ ಜರ್ಮನಿಯ ಕೋಪೋದ್ರಿಕ್ತ ಜನರು ನುಗ್ಗಬಹುದಿತ್ತು . ಹಾಗೇನಾದರೂ ಆದರೆ ಸೋವಿಯತ್ ಒಕ್ಕೂಟದ ರಹಸ್ಯ ದಾಖಲೆಗಳು ಜಗತ್ತಿನ ಎದುರು ಬಟಾಬಯಲಾಗುವ ಸಾಧ್ಯತೆಯಿತ್ತು. ಇದನ್ನು ತಪ್ಪಿಸಲು ಆತ ಅಲ್ಲಿನ ರಹಸ್ಯ ದಾಖಲೆಗಳನ್ನು ರಾಯಭಾರ ಕಛೇರಿಯಲ್ಲಿನ ಉರಿಯುವ ಕುಲುಮೆಗೆ ಹಾಕಿದ. ಎಷ್ಟು ಅಗಾಧ ಪ್ರಮಾಣದ ರಹಸ್ಯ ದಾಖಲೆಗಳು ಅಗ್ನಿಗೆ ಆಹುತಿಯಾಗಿದ್ದವು ಎಂದರೆ ಬೆಂಕಿಯ ತೀವ್ರತೆಗೆ ಕುಲುಮೆ ಕರಗಲು ಪ್ರಾರಂಭವಾಯಿತು ಎನ್ನಲಾಗಿದೆ. ನಂತರ ಜರ್ಮನಿಯಲ್ಲಿನ ರಾಯಭಾರ ಕಚೇರಿಯನ್ನು ತೊರೆದು ಸೋವಿಯತ್ ಒಕ್ಕೂಟಕ್ಕೆ ಮರಳಿ ಬಂದಿದ್ದ ಈ ಗೂಢಚಾರಿ ಸೋವಿಯತ್ ಒಕ್ಕೂಟದ ಪತನಕ್ಕೂ ಸಾಕ್ಷಿಯಾಗಿದ್ದ . ಅಲ್ಲಿಗೆ ಶೀತಲ ಸಮರ (cold war) ಕೊನೆಗೊಂಡಿತ್ತು , ಅಮೆರಿಕ ಈ ಶೀತಲ ಸಮರದಲ್ಲಿ ತನ್ನ ಗೆಲುವಿನ ನಗೆಯನ್ನು ಬೀರಿತ್ತು.
ಅಂದು ಗೂಢಚಾರಿಯಾಗಿದ್ದ ವ್ಯಕ್ತಿ ಇಂದು ಸೋವಿಯತ್ ಒಕ್ಕೂಟ ಛಿದ್ರಗೊಂಡ ಸರಿಯಾಗಿ 32 ವರ್ಷಗಳ ನಂತರ ಅಮೆರಿಕದ ನೇತೃತ್ವದ ನ್ಯಾಟೋ ಬಣ್ಣಕ್ಕೆ ಎಚ್ಚರಿಕೆಯನ್ನು ಕೊಡುತ್ತಿದ್ದಾರೆ. ಯಾವ ನ್ಯಾಟೋ ಪಡೆ ಸೋವಿಯತ್ ಒಕ್ಕೂಟವನ್ನು ಮಣಿಸಿದ ಹುಮ್ಮಸ್ಸಿನಲ್ಲಿ ದಶಕಗಳ ಕಾಲ ನಮಗಾರು ಎದುರಿಲ್ಲ ಎಂಬಂತೆ ಮೆರೆಯುತ್ತಿತ್ತೋ ಅದೇ ನ್ಯಾಟೋ ಪಡೆ ಅದೇ ಮಾಜಿ ಗೂಢಚಾರನ ಮಾತುಗಳಿಗೆ ಹೆದರಿ ಹಿಮ್ಮೆಟ್ಟುತ್ತಿದೆ . ಯಾವ ಉಕ್ರೇನ್ ನನ್ನು ತನ್ನ ಬಣಕ್ಕೆ ಸೇರಿಸಿಕೊಳ್ಳಬೇಕೆಂದು ನ್ಯಾಟೋ ಹವಣಿಸಿತ್ತೊ, ಅದೇ ಉಕ್ರೇನ್ ನ ಮೇಲೆ ಮಾಜಿ ಗೂಢಚಾರರಾದ ವ್ಲಾಡಿಮಿರ್ ಪುಟಿನ್ ರ ರಷ್ಯಾದ ಸೈನ್ಯ ಕ್ಷಿಪಣಿಗಳ ಮಳೆಯನ್ನೇ ಸುರಿಸುತ್ತಿದೆ. ಉಕ್ರೇನ್ ನ ರಾಜಧಾನಿ ಕೀವ್ ಅಕ್ಷರಶಃ ನರಕವಾಗಿದೆ, ನ್ಯಾಟೋ ಪಡೆಗಳು ಕೈಕಟ್ಟಿ ಕುಳಿತಿವೆ . ಉಕ್ರೇನ್ ನ ಸುಮಾರು 50,000 ನಾಗರಿಕರು ನಿರಾಶ್ರಿತರಾಗಿ ನೆರೆಯ ದೇಶಗಳಾದ ಪೋಲೆಂಡ್ , ರೊಮಾನಿಯಾಗಳ ಕಡೆ ಧಾವಿಸುತ್ತಿದ್ದಾರೆ . ಹೀಗೇಕಾಯಿತು? ಇದೇನಾದರೂ 30 ವರ್ಷಗಳ ಹಿಂದೆ ತನ್ನ ದೇಶಕ್ಕೆ ಶೀತಲ ಸಮರದಲ್ಲಾದ ಅವಮಾನಕರ ಸೋಲಿಗೆ ವ್ಲಾಡಿಮಿರ್ ಪುಟಿನ್ ರ ಪ್ರತೀಕಾರವೇ? ಎಂಬ ಪ್ರಶ್ನೆ ಮೂಡುತ್ತದೆ.
ಯುದ್ಧದ ಸಂಪೂರ್ಣ ಸಿದ್ಧತೆಯನ್ನು ಮಾಡಿಕೊಂಡಿದ್ದ ರಷ್ಯಾ ಮೊದಲು ಯುದ್ಧಾಭ್ಯಾಸದ ನೆಪದಲ್ಲಿ ಉಕ್ರೇನ್ ಮೂರು ಕಡೆಗಳಿಂದ ಸುತ್ತುವರೆದಿತ್ತು. ಉಕ್ರೇನ್ ನ ಮೇಲೆ ಆಕ್ರಮಣ ಮಾಡುವ ಯಾವ ಉದ್ದೇಶವೂ ಇಲ್ಲವೆನ್ನುತ್ತಿದ್ದ ಪುಟಿನ್, ಇದ್ದಕ್ಕಿದ್ದಂತೆ ಉಕ್ರೇನ್ ಆಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿಬಿಟ್ಟರು . ತಕ್ಷಣ ಉಕ್ರೇನ್ ನ ಗಡಿಯೊಳಗೆ ನುಗ್ಗಿದ ರಷ್ಯಾದ ಪಡೆಗಳು ಗಡಿಭಾಗದ ಅನೇಕ ನಗರಗಳನ್ನು ತಮ್ಮ ವಶಕ್ಕೆ ಪಡೆದುಕೊಂಡವು. ದಕ್ಷಿಣ ಭಾಗದ ಕಪ್ಪು ಸಮುದ್ರ(Black sea) ದಿಂದ ಉಕ್ರೇನ್ ನನ್ನು ಆಕ್ರಮಿಸಿದ ರಷ್ಯಾದ ನೌಕಾಪಡೆ ಒಡೆಸ್ಸಾ ನಗರವನ್ನು ವಶಪಡಿಸಿಕೊಂಡಿತು . ಕೇವಲ ಎರಡು ದಿನಗಳಲ್ಲಿ ಉಕ್ರೇನ್ ನ ರಸ್ತೆಗಳ ಮೇಲೆ ರಷ್ಯಾದ ಯುದ್ಧ ಟ್ಯಾಂಕ್ ಗಳ ಓಡಾಟ ಸಾಮಾನ್ಯ ಎಂಬಂತಾಗಿಬಿಟ್ಟಿದೆ . ರಷ್ಯಾದ ಮಿಗ್-29 ಯುದ್ಧ ವಿಮಾನಗಳು ಉಕ್ರೇನ್ ನ ನಗರಗಳ ಮೇಲೆ ಬಾಂಬುಗಳ ಮಳೆಯನ್ನು ಸುರಿಸುತ್ತಿವೆ. ಉಕ್ರೇನ್ ನ ರಾಜಧಾನಿ ಕೀವ್ ನ್ನು ರಷ್ಯಾದ ಪಡೆಗಳು ಸುತ್ತುವರೆದಿದೆ. ಇಂದಿನ ಯುದ್ಧ ಸನ್ನಿವೇಶದಲ್ಲಿ ಸೈಬರ್ ವ್ಯವಸ್ಥೆಯು ತೀರಾ ಮುಖ್ಯ, ಆದರೆ ಉಕ್ರೇನ್ ನ ಸೈಬರ್ ವ್ಯವಸ್ಥೆಯನ್ನು ರಷ್ಯಾದ ಸೈಬರ್ ಪಡೆ ಹಾಳುಗೆಡವಿದೆ. ಉಕ್ರೇನ್ ನ್ನು ಮಿಲಿಟರಿ ರಹಿತ(de-militarised) ರಾಷ್ಟ್ರವನ್ನಾಗಿ ಮಾಡುವುದಾಗಿ ರಷ್ಯಾದ ಅಧ್ಯಕ್ಷ ಪುಟಿನ್ ಘೋಷಿಸಿದ್ದಾರೆ . ಇತ್ತ ಉಕ್ರೇನ್ ಅಕ್ಷರಶಃ ಏಕಾಂಗಿಯಾಗಿ ನಿಂತಿದೆ.
ವಿಶ್ವದ ರಾಷ್ಟ್ರಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಬೇಕೆಂಬ ಅಮೆರಿಕದ ಹಪಾಹಪಿಗೆ , ರಷ್ಯಾದ ಮಹತ್ವಾಕಾಂಕ್ಷೆಗೆ ಹಾಗೂ ಉಕ್ರೇನ್ ನ ರಾಜಕೀಯ ನಾಯಕರ ದೂರದೃಷ್ಟಿ ಹೊಂದಿರದ ಹಾಗೂ ವಿವೇಕ ರಹಿತ ನಿಲುವುಗಳಿಗೆ ಉಕ್ರೇನ್ ನ ಸಾಮಾನ್ಯ ಜನತೆ ನರಳುವಂತಾಗಿದೆ. ಜನರ ಮುಖದಲ್ಲಿ ಆತಂಕ , ನೋವುಗಳು ಮಡುಗಟ್ಟಿವೆ. ಉಕ್ರೇನ್ ನ ಅಧ್ಯಕ್ಷರು ದೈಹಿಕವಾಗಿ ಸಮರ್ಥರಾಗಿರುವ ನಾಗರಿಕರನ್ನು ಯುದ್ಧದಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದಾರೆ . ಹಾಗಾಗಿ ಉಕ್ರೇನ್ ನ ಸಾಮಾನ್ಯ ನಾಗರೀಕರು ತಮ್ಮ ಕುಟುಂಬದ ಸದಸ್ಯರನ್ನು ಬಿಟ್ಟು ಯುದ್ದದಲ್ಲಿ ಪಾಲ್ಗೊಳ್ಳಲು ಹೊರಡುವಾಗ ಬಹುಶಃ ಇದೇ ನಮ್ಮ ಕೊನೆಯ ಭೇಟಿಯೋ ಎಂಬಂತೆ ಅವರ ಮುಖದಲ್ಲಿ ಮೂಡುವ ಭಾವ ನೋಡುಗರ ಮನಸ್ಸನ್ನು ಹಿಂಡದೆ ಇರಲು ಸಾಧ್ಯವಿಲ್ಲ. ಬೇರೆ ದಾರಿಯೇ ಕಾಣದೆ ಸುರಕ್ಷತೆಗಾಗಿ ದೇಶವನ್ನು ಬಿಟ್ಟು ಗಡಿ ದಾಟಿ ಹೋಗುವವರ ಗುಂಪು ಒಂದೆಡೆಯಾದರೆ, ಬೇರೆ ದೇಶಗಳಲ್ಲಿ ನೆಲೆಸಿದ್ದು , ಅಪಾಯದಲ್ಲಿರುವ ತಮ್ಮ ದೇಶದ ರಕ್ಷಣೆಗಾಗಿ ರಷ್ಯಾದ ಪಡೆಗಳೊಂದಿಗೆ ಸೆಣೆಸಲು ಉಕ್ರೇನ್ ನ್ನು ಪ್ರವೇಶಿಸುತ್ತಿದ್ದ ಯುವಕರ ಗುಂಪೊಂದು ನೆರೆದಿದ್ದ ಜನರ ಕಣ್ಣಂಚನ್ನು ಒದ್ದೆ ಮಾಡಿತ್ತು.
ಇತ್ತ ಅಮೆರಿಕಾ ಹಾಗೂ ಅದರ ಮಿತ್ರ ರಾಷ್ಟ್ರಗಳು ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನವನ್ನು ವಿಧಿಸಿವೆ . ರಷ್ಯಾದ ಐದು ಪ್ರಮುಖ ಬ್ಯಾಂಕುಗಳ ಮೇಲೆ ದಿಗ್ಬಂಧನವನ್ನು ಹೇರಲಾಗಿದೆ. ಜರ್ಮನಿ ತಾನು ರಷ್ಯಾದೊಂದಿಗೆ ಹೊಂದುತ್ತಿದ್ದ ನಾರ್ಡ್ ಸ್ಕ್ರೀಮ್ -2 ಅನಿಲ ಕೊಳವೆ ಮಾರ್ಗವನ್ನು ರದ್ದು ಪಡಿಸಿದೆ. ಆದರೆ ರಷ್ಯಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ . ರಷ್ಯಾದ ಆಯಕಟ್ಟಿನ ಪಾಲುದಾರ (strategic partner) ನಾಗಿರುವ ಭಾರತ ಎರಡೂ ದೇಶಗಳು ಮಾತುಕತೆ ನಡೆಸುವಂತೆ ಹಾಗೂ ಯುದ್ಧದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದೆ. ರಷ್ಯಾದ ಅಧ್ಯಕ್ಷರು ಭಾರತದ ಪ್ರಧಾನಿಗೆ ಟೆಲಿಫೋನ್ ಕರೆಯ ಮೂಲಕ ರಷ್ಯಾದ ನಡೆಗಳ ಬಗ್ಗೆ ವಿವರಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ(security council) ತಾತ್ಕಾಲಿಕ ಸದಸ್ಯ (non permanent member) ನಾಗಿರುವ ಭಾರತ, ಭದ್ರತಾ ಮಂಡಳಿಯಲ್ಲಿ ರಷ್ಯಾದ ವಿರುದ್ಧ ಮತ ಚಲಾಯಿಸುವುದರಿಂದ ದೂರ ಉಳಿದಿದೆ.
ಹಾಗಿದ್ದರೆ ಇಂದು ನಡೆಯುತ್ತಿರುವ ಉಕ್ರೇನ್ ನ ಮೇಲಿನ ಆಕ್ರಮಣವನ್ನು ತಡೆಯಲು ಸಾಧ್ಯವಿರಲಿಲ್ಲವೇ? ದಶಕಗಳ ಹಿಂದೆ ಉಕ್ರೇನ್ ನ ನಾಯಕರು ಅಂತಹ ಒಂದು ವಿವೇಕರಹಿತ ನಿರ್ಧಾರವನ್ನು ತೆಗೆದುಕೊಳ್ಳದೇ ಹೋಗಿದ್ದರೆ , ಖಂಡಿತ ಸಾಧ್ಯವಿತ್ತು , ಸೋವಿಯತ್ ಒಕ್ಕೂಟದ ವಿಘಟನೆ ಯ ನಂತರ ಸ್ವತಂತ್ರಗೊಂಡ ಉಕ್ರೇನ್ ಜಗತ್ತಿನ ಮೂರನೆಯ ಅತಿ ಹೆಚ್ಚು ಪರಮಾಣು ಸಿಡಿತಲೆಗಳ(nuclear war heads) ನ್ನು ಹೊಂದಿತ್ತು . ಆದರೆ ಬುಡಾಪೆಸ್ಟ್ ಒಪ್ಪಂದಕ್ಕೆ ಸಹಿ ಹಾಕಿದ ಉಕ್ರೇನ್ ತನ್ನ ಪರಮಾಣು ಸಿಡಿತಲೆಗಳನ್ನು ರಷ್ಯಕ್ಕೆ ಹಸ್ತಾಂತರಿಸಿತು . ಇದಕ್ಕೆ ಪ್ರತಿಯಾಗಿ ಅಮೆರಿಕ, ಬ್ರಿಟನ್ ಹಾಗೂ ರಷ್ಯಾ ಗಳು ಉಕ್ರೇನ್ ನ ಸಾರ್ವಭೌಮತೆಯನ್ನು ಗೌರವಿಸುವುದಾಗಿ ಹೇಳಿದ್ದವು. ಆದರೆ ಇಂದೇನಾಗಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ!
ಹಾಗೆ ನೋಡಿದರೆ ಅಮೆರಿಕ ಹಾಗೂ ನ್ಯಾಟೋ ರಾಷ್ಟ್ರಗಳ ಮುನ್ನುಗ್ಗುವ ನೀತಿ(forward policy) ಹಾಗೂ ತೆರೆದ ಬಾಗಿಲ ನೀತಿಗಳೂ(open door policy) ಸಹ ಇಂದಿನ ರಷ್ಯಾದ ಆಕ್ರಮಣಕ್ಕೆ ಕಾರಣಗಳು ಎನ್ನಬಹುದು.1990 ರ ದಶಕದಲ್ಲಿ ಪೂರ್ವದ ಕಡೆಗೆ ನ್ಯಾಟೋ ಪಡೆಯನ್ನು ವಿಸ್ತರಿಸುವುದಿಲ್ಲ ವೆಂದು ರಷ್ಯಾಗೆ ಭಾಷೆ ಇತ್ತ ಅಮೆರಿಕ ನಂತರದ ದಿನಗಳಲ್ಲಿ ನೀಡಿದ ವಾಗ್ದಾನವನ್ನು ಮುರಿದು ಅನೇಕ ಮಾಜಿ ಸೋವಿಯತ್ ಒಕ್ಕೂಟದ ರಾಷ್ಟ್ರಗಳನ್ನು ಹಾಗೂ ಸೋವಿಯತ್ ಒಕ್ಕೂಟದ ಬಣದಲ್ಲಿದ್ದ ರಾಷ್ಟ್ರಗಳನ್ನು ತನ್ನ ನ್ಯಾಟೋ ಬಣಕ್ಕೆ ಸೇರಿಸಿಕೊಂಡಿತು . ಇದು ಸಹಜವಾಗಿಯೇ ರಷ್ಯಾಗೆ ಅಭದ್ರತೆಯ ಭಾವನೆ ಬೆಳೆಯಲು ಕಾರಣವಾಯಿತು. ಐತಿಹಾಸಿಕವಾಗಿ ರಷ್ಯಾದ ಮೇಲೆ ನಡೆಯುತ್ತಿರುವ ಆಕ್ರಮಣಗಳು ಉಕ್ರೇನ್ ನ ಭೂಭಾಗದ ಕಡೆಯಿಂದಲೇ ನಡೆಯುತ್ತಿರುವ ಕಾರಣಕ್ಕೆ ಉಕ್ರೇನ್ ನ ಭೂಭಾಗವನ್ನು ರಷ್ಯಾ ತುಂಬಾ ಗಂಭೀರವಾಗಿ ಪರಿಗಣಿಸುತ್ತದೆ. ನೆಪೋಲಿಯನ್ ನ ದಾಳಿ ರಷ್ಯಾದ ಮೇಲೆ ನಡೆದದ್ದು ಉಕ್ರೇನ್ ನ ಭೂಭಾಗದ ಮೂಲಕವೇ! ನಾಜಿ ಜರ್ಮನಿ ಕೂಡ ಇದೇ ಹಾದಿಯಿಂದ ರಷ್ಯಾದ ಮೇಲೆ ಆಕ್ರಮಣವೆಸೆಗಿದ್ದು!
2014 ರಲ್ಲಿ ಉಕ್ರೇನ್ ನಲ್ಲಿ ನಡೆದ ನಾಗರಿಕ ದಂಗೆಯು ರಷ್ಯಾ ಪರವಾದ ಧೋರಣೆಯನ್ನು ಹೊಂದಿದ್ದ ಅಲ್ಲಿನ ಅಧ್ಯಕ್ಷ ವಿಕ್ಟರ್ ನ ಪದಚ್ಯುತಿಗೆ ಕಾರಣವಾಯಿತು. ಈ ದಂಗೆಯ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಪುಟಿನ್ ವಾದಿಸುತ್ತಾರೆ. ನಂತರದ ದಿನಗಳಲ್ಲಿ ಉಕ್ರೇನ್ ನ ಮೇಲೆ ದಾಳಿ ನಡೆಸಿದ ರಷ್ಯಾ ಕ್ರಿಮಿಯಾ ವನ್ನು ವಶಪಡಿಸಿಕೊಂಡಿತು . ಅಲ್ಲದೆ ಇಂದಿನ ಉಕ್ರೇನ್ ಸರ್ಕಾರ ಅಮೇರಿಕದ ಕೈಗೊಂಬೆ ಎಂದು ರಷ್ಯಾ ಭಾವಿಸುತ್ತದೆ.
ಇಂದಿನ ಉಕ್ರೇನ್ ನ ಪರಿಸ್ಥಿತಿಗೆ ಅಲ್ಲಿನ ಪ್ರತ್ಯೇಕತಾವಾದವೂ ಕಾರಣವಾಗಿದೆ. ಡಾನ್ಬಾಸ್ ಎಂಬುದು ಉಕ್ರೇನ್ ನ ಪೂರ್ವ ಭಾಗದ ಒಂದು ಪ್ರದೇಶ. ಇಲ್ಲಿನ ಡೊನೆಟಸ್ಕ್ ಹಾಗೂ ಲುಹಾನಸ್ಕ್ ಪ್ರದೇಶಗಳಲ್ಲಿನ ಪ್ರತ್ಯೇಕತಾವಾದಿಗಳು ಉಕ್ರೇನ್ ನ ಸೇನೆಯೊಂದಿಗೆ ಕಾಳಗವನ್ನು 2014 ರಿಂದಲೂ ನಡೆಸುತ್ತಿದ್ದಾರೆ, ಇವರನ್ನು ರಷ್ಯಾ ಬೆಂಬಲಿಸುತ್ತಾ ಬಂದಿದೆ. ಪ್ರತ್ಯೇಕತಾವಾದಿಗಳು ಹಾಗೂ ಉಕ್ರೇನ್ ಸರ್ಕಾರದೊಂದಿಗಿನ ಸಂಘರ್ಷವನ್ನು ತಿಳಿಗೊಳಿಸಲು ಮಿನಸ್ಕ್ ಒಪ್ಪಂದ 2014-15 ರಲ್ಲಿ ಜಾರಿಗೆ ಬಂದಿತು. ಈ ಒಪ್ಪಂದ ಉಕ್ರೇನ್ ನ ಹಿತಾಸಕ್ತಿಗೆ ಪೂರಕವಲ್ಲದೆ ಹೋದರು ಶಾಂತಿಸ್ಥಾಪನೆಗೆ ಇರಬೇಕಾದ ಒಂದು ಮಾರ್ಗವಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಈಗ ಡೊನೆಟಸ್ಕ ಹಾಗೂ ಲುಹಾನಸ್ಕ ಪ್ರದೇಶಗಳನ್ನು ಸ್ವತಂತ್ರ ರಾಷ್ಟ್ರಗಳು ಎಂದು ರಷ್ಯಾ ಗುರುತಿಸುವ ಮೂಲಕ ಮಿನಸ್ಕ್ ಒಪ್ಪಂದ ಪೂರ್ತಿಯಾಗಿ ಮುರಿದು ಬಿದ್ದಿದೆ.
ಈಗ ನಡೆಯುತ್ತಿರುವ ಯುದ್ಧದ ಪರಿಣಾಮಗಳು ಜಗತ್ತಿನ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿವೆ. ಕಚ್ಚಾ ತೈಲದ(crude oil) ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಏಳು ವರ್ಷಗಳಲ್ಲಿ ಮೊದಲ ಬಾರಿಗೆ 100 ಡಾಲರ್ ನ್ನು ದಾಟಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಹಣದುಬ್ಬರ(ಇನ್ಫ್ಲೇಶನ್)ದಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಏರಿದ ಕಚ್ಚಾತೈಲದ ಬೆಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರತದ ಷೇರು ಮಾರುಕಟ್ಟೆ ಸೂಚ್ಯಂಕ(ಸೆನ್ಸೆಕ್ಸ್) ಯುದ್ಧ ಪ್ರಾರಂಭವಾದ ನಂತರ ಸುಮಾರು 2000 ಅಂಶಗಳಷ್ಟು ಪತನಗೊಂಡಿದೆ. ರಷ್ಯಾ ಹಾಗೂ ಉಕ್ರೇನ್ ಒಟ್ಟಾರೆಯಾಗಿ ಜಗತ್ತಿನ 25% ಗೋಧಿಯನ್ನು ರಫ್ತು ಮಾಡುತ್ತವೆ . ಅಲ್ಲಿನ ಯುದ್ಧದಿಂದಾಗಿ ಕೆಲವು ದೇಶಗಳಿಗೆ ಆಹಾರ ಧಾನ್ಯದ ಸಮಸ್ಯೆ ಉಂಟಾಗಬಹುದು. ಉಕ್ರೇನ್ ಭಾರತದಿಂದ ಅಪಾರ ಪ್ರಮಾಣದ ಚಹಾವನ್ನು ಆಮದು ಮಾಡಿಕೊಳ್ಳುತ್ತದೆ. ಯುದ್ಧದ ಕಾರಣದಿಂದ ಭಾರತದ ಚಹಾ ಉದ್ಯಮ ಸ್ವಲ್ಪ ಪ್ರಮಾಣದ ನಷ್ಟವನ್ನು ಎದುರಿಸಬೇಕಾಗಿ ಬರಬಹುದು . ಉಕ್ರೇನ್ ಸೆಮಿಕಂಡಕ್ಟರ್ ಚಿಪ್ ಗಳ ತಯಾರಿಕೆಗೆ ಬೇಕಾಗುವ ಲೋಹಗಳ ನೆಲೆವೀಡು. ಅಲ್ಲಿನ ಯುದ್ಧವು ಸೆಮಿಕಂಡಕ್ಟರ್ ಚಿಪ್ ಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ತಲೆನೋವು ತಂದರೂ ಅಚ್ಚರಿಯಿಲ್ಲ.
ಇವೆಲ್ಲದರೊಂದಿಗೆ ವಿಶ್ವದ ಸಾಮರಸ್ಯವನ್ನು ಕಾಪಾಡಬೇಕಾದ ವಿಶ್ವಸಂಸ್ಥೆ ಬೆದರು ಬೊಂಬೆಯಂತೆ ನಿಂತಿರುವುದು, ಆ ಸಂಸ್ಥೆಯ ಬಗ್ಗೆ ಅಸಡ್ಡೆ ಹೆಚ್ಚಾಗಲು ಕಾರಣವಾಗುತ್ತಿದೆ. ಏನೇ ಇರಲಿ, ಮಾನವರಿಗೆ ಕೆಡುಕನ್ನು ತರುವ ಇಂತಹ ಯುದ್ಧಗಳು ಇನ್ನು ನಡೆಯದಿರಲಿ ಹಾಗೂ ಈಗ ನಡೆಯುತ್ತಿರುವ ಯುದ್ಧವು ಬೇಗ ಕೊನೆಯಾಗಲಿ ಎಂದು ನಾವೆಲ್ಲರೂ ಆಶಿಸೋಣ.












































