
ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್, ಜನಪ್ರಿಯ ಕಾರ್ಗೋ ವಾಹನದ ಎಲೆಕ್ಟ್ರಿಕ್ ಆವೃತ್ತಿಯಾದ ಆಲ್-ನ್ಯೂ ಏಸ್ ಇವಿ ಅನ್ನು ಬಿಡುಗಡೆ ಮಾಡಿದೆ. ಟಾಟಾ ಮೋಟಾರ್ಸ್ ಮುಂದಿನ ತ್ರೈಮಾಸಿಕದಲ್ಲಿ ಹೊಸ ಏಸ್ ಇವಿ ಬೆಲೆಗಳನ್ನು ಬಹಿರಂಗಪಡಿಸಲಿದೆ. ಬೆಲೆ ಸುಮಾರು 6ರಿಂದ 8 ಲಕ್ಷದ ಮಧ್ಯೆ ಇರುವ ಸಂಭವವಿದೆ. ಜೂನ್ 2022 ರಲ್ಲಿ ವಾಹನದ ವಿತರಣೆಗಳು ಸಹ ಪ್ರಾರಂಭವಾಗುತ್ತವೆ.
ಒಂದು ಚಾರ್ಜ್ ಗೆ 154 ಕಿಲೋ ಮೀಟರ್ ಕ್ರಮಿಸುವ ಸಾಮರ್ಥ್ಯ ಹೊಂದಿರುವ ಈ ಟಾಟಾ ಏಸ್ ಎಲೆಕ್ಟ್ರಿಕ್ ಕಾರ್ಗೋ ವಾಹನ ಬಿಡುಗಡೆಯಾದ ಕೂಡಲೇ 39,000 ಬುಕಿಂಗ್ ಗಳನ್ನು ಪಡೆದುಕೊಂಡಿದೆ. ಜತೆಗೆ ಅಮೆಜಾನ್, ಬಿಗ್‌ಬಾಸ್ಕೆಟ್, ಫ್ಲಿಪ್‌ಕಾರ್ಟ್ ಮತ್ತು ಅವರ ಲಾಜಿಸ್ಟಿಕ್ಸ್ ಪಾಲುದಾರರು ಸೇರಿದಂತೆ ಹಲವಾರು ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ ಕಂಪನಿಗಳೊಂದಿಗೆ ಟಾಟಾ ಮೋಟಾರ್ಸ್ ಕಂಪನಿ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅಡಿಯಲ್ಲಿ ಆ ಕಂಪನಿಗಳು ಟಾಟಾ ಏಸ್ ಇವಿ ಯನ್ನು ಹೊಂದಲಿವೆ.
ಟಾಟಾ ಏಸ್ ಇವಿ ವಾಹನವು ಟಾಟಾ ಮೋಟರ್‌ನ ಇವೊಜೆನ್ ಪವರ್‌ಟ್ರೇನ್ ಅನ್ನು ಒಳಗೊಂಡಿರುವ ಮೊದಲ ಉತ್ಪನ್ನವಾಗಿದ್ದು ಅದು 154 ಕಿಲೋಮೀಟರ್‌ಗಳ ಪ್ರಮಾಣೀಕೃತ ಮೈಲೇಜ್ ಅನ್ನು ನೀಡುತ್ತದೆ. ಹೊಸ ಮಾದರಿಯು ಸುಧಾರಿತ ಬ್ಯಾಟರಿ ಕೂಲಿಂಗ್ ಸಿಸ್ಟಮ್ ಮತ್ತು ಚಾರ್ಜೆಬಲ್ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಸುರಕ್ಷಿತ ಹಾಗು ಎಲ್ಲಾ ಹವಾಮಾನದಲ್ಲೂ ಕಾರ್ಯಾಚರಣೆ ಮಾಡುವ ಕ್ಷಮತೆಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇದು 27ಕಿ.ವ್ಯಾಟ್ (36ಬಿಎಚ್ಪಿ) ಮೋಟಾರ್‌ನಿಂದ 130ಎನ್.ಎಂ ಪೀಕ್ ಟಾರ್ಕ್ ಅನ್ನು ಹೊಂದಿದೆ.
ಚಾರ್ಜಿಂಗ್ ಆಯ್ಕೆಗಳು ನಿಯಮಿತ ಮತ್ತು ವೇಗದ ಚಾರ್ಜಿಂಗ್ ಎರಡನ್ನೂ ಒಳಗೊಂಡಿರುತ್ತವೆ. ಪ್ರತಿಯೊಂದಕ್ಕೂ ಪ್ರತ್ಯೇಕ ಪೋರ್ಟ್‌ಗಳು ಇರಲಿವೆ. ಮನೆಯ ವಾತಾವರಣದಲ್ಲಿ, ಪ್ರಮಾಣಿತ 15ಆಂಪ್ಸ್ ಸಾಕೆಟ್ ಮೂಲಕ ಇವಿ ಅನ್ನು ಚಾರ್ಜ್ ಮಾಡಬಹುದು. ನಿಯಮಿತ ಚಾರ್ಜರ್ ಅನ್ನು ಬಳಸಿದಾಗ, 6-7 ಗಂಟೆಗಳಲ್ಲಿ 20 ಪರ್ಸೆಂಟೇಜ್ ನಿಂದ 100 ಪರ್ಸೆಂಟೇಜ್ ಚಾರ್ಜಿಂಗ್ ಸಾಧಿಸಬಹುದು. ವೇಗದ ಚಾರ್ಜರ್‌ನೊಂದಿಗೆ, 10 ಶೇಕಾಡಾದಿಂದ 80 ಶೇಕಡಾವರೆಗೆ 105 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.












































