
ಮಂಗಳೂರು: ಕೇರಳದಲ್ಲಿ ಕೋವಿಡ್-19 ಸಾಂಕ್ರಾಮಿಕ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಹಿನ್ನಲೆಯಲ್ಲಿ ಮುಂದಿನ ಎರಡು ತಿಂಗಳುಗಳ ಕಾಲ ದಕ್ಷಿಣ ಕನ್ನಡದಿಂದ ಕೇರಳಕ್ಕೆ ಪ್ರವೇಶಿಸುವುದನ್ನು ಹಾಗು ಕೇರಳದಿಂದ ಜಿಲ್ಲೆ ಪ್ರವೇಶಿಸುವುದನ್ನು ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕೇರಳಕ್ಕೆ ಹೋಗುವ ಉದ್ದೇಶವಿದ್ದವರು ಒಕ್ಟೋಬರ್ ಅಂತ್ಯದವರೆಗೆ ಪ್ರಯಾಣವನ್ನು ಮುಂದೂಡುವಂತೆ ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಕೇಳಿಕೊಂಡಿದ್ದಾರೆ. ಈಗಾಗಲೇ ಪ್ಯಾರಾ ಮೆಡಿಕಲ್, ನರ್ಸಿಂಗ್ ವಿದ್ಯಾರ್ಥಿಗಳು ಕೇರಳದಿಂದ ಒಕ್ಟೊಬರ್ ಅಂತ್ಯದವರೆಗೆ ಬರುವಂತಿಲ್ಲ ಎಂದು ತಿಳಿಸಲು ಆಯಾಯ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಟಲ್, ಕಚೇರಿ, ಆಸ್ಪತ್ರೆ, ಕೈಗಾರಿಕೆಗಳು ಇತ್ಯಾದಿ ಕಾರ್ಯಸ್ಥಳಗಳಿಗೆ ಕೇರಳದಿಂದ ಬರುವ ಉದ್ಯೋಗಿಗಳನ್ನು ಎರಡು ತಿಂಗಳು ಕರೆಸದಂತೆ ಆದೇಶ ನೀಡಲಾಗಿದೆ. ಅಲ್ಲದೆ ಇಲ್ಲಿಯೇ ವಾಸವಿರುವ ಕೇರಳದ ಉದ್ಯೋಗಿಗಳನ್ನು ಎರಡು ತಿಂಗಳು ಕೇರಳಕ್ಕೆ ಕಳುಹಿಸದಂತೆ ಸೂಚಿಸಲಾಗಿದೆ. ಕೇರಳದಲ್ಲಿ ಉದ್ಯಮ ಹೊಂದಿರುವ ಕೈಗಾರಿಕೋದ್ಯಮಿಗಳು ಕೂಡ ಕೇರಳಕ್ಕೆ ಹೋಗದಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಗಡಿಯಲ್ಲಿ ಕಟ್ಟುನಿಟ್ಟಿನ ಪಹರೆ ಹಾಕಲಾಗಿದ್ದು ಕೇರಳಕ್ಕೆ ಹೋಗುವ ಉದ್ಧೇಶವಿದ್ದವರು ಎರಡು ತಿಂಗಳುಗಳ ಕಾಲ ತಮ್ಮ ಪ್ರವಾಸ ಮುಂದೂಡುವುದು ಒಳಿತು. ಕೋವಿಡ್ ಜತೆಗೆ ನಿಫಾ ಕೂಡ ಕಾಣಿಸಿಕೊಂಡಿರುವುದರಿಂದ ಜಿಲ್ಲೆಯನ್ನು ಸಾಂಕ್ರಾಮಿಕದಿಂದ ರಕ್ಷಿಸಿಕೊಳ್ಳಲು ಈ ಕ್ರಮ ಅನಿವಾರ್ಯ ಎನ್ನಲಾಗಿದೆ.












































